ದಾಂಡೇಲಿ: ಅಪ್ರಾಪ್ತ ಅಂಗವಿಕಲೆಯ ಅಶ್ಲೀಲ ಫೋಟೋ ತೆಗೆದು ಅದನ್ನು ಬಹಿರಂಗಪಡಿಸುವುದಾಗಿ ಬೆದರಿಸಿ ಅತ್ಯಾಚಾರ ಮಾಡಿದ ಕ್ರೂರಿಗೆ ನ್ಯಾಯಾಲಯ 21 ವರ್ಷ ಜೈಲು ಹಾಗೂ 1.5 ಲಕ್ಷ ರೂ ದಂಡ ವಿಧಿಸಿದೆ. ಅಶ್ಲೀಲ ಫೋಟೋಗಳನ್ನು ಹಲವರಿಗೆ ರವಾನಿಸಿದಲ್ಲದೇ ವಾಟ್ಸಪ್ ಸ್ಟೇಟಸ್ ಹಾಕಿ ವಿಕೃತಿ ಮೆರೆದಿದ್ದನ್ನು ಸಹ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿ ಶಿಕ್ಷೆ ಪ್ರಕಟಿಸಿದೆ.
ಬೋನವೆಂಚರ್ ಫನಾಂಡಿಸ್ ಎಂಬಾತ ಅಮೀನಾ ಪ್ರಾನ್ಸಿಸ್ (ಹೆಸರು ಬದಲಿಸಿದೆ) ಎಂಬ ಅಪ್ರಾಪ್ತ ಅಂಗವಿಕಲೆಯನ್ನು ಪ್ರೀತಿಸುವ ನಾಟಕವಾಡಿದ್ದ. ಆಕೆಗೆ ಅರಿವಿಲ್ಲದಂತೆ ತನ್ನ ಮೊಬೈಲಿನಲ್ಲಿ ಅಶ್ಲೀಲ ಫೋಟೋಗಳನ್ನು ತೆಗೆದಿದ್ದ. 2021ರ ಫೆ 1ರಂದು ಬಾಲಕಿ ಮನೆಯಲ್ಲಿ ಒಬ್ಬಳೆ ಇದ್ದಾಗ ಅಲ್ಲಿ ನುಗ್ಗಿದ ಆತ ಆ ಫೋಟೋಗಳನ್ನು ಕಾಣಿಸಿದ್ದ. ತನ್ನೊಂದಿಗೆ ಸಹಕರಿಸದೇ ಇದ್ದರೆ ಅಶ್ಲೀಲ ಫೋಟೋಗಳನ್ನು ಆಕೆಯ ತಂದೆ-ತಾಯಿ ಹಾಗೂ ಚರ್ಚಿನ ಎಲ್ಲಾ ಸದಸ್ಯರಿಗೆ ಕಳುಹಿಸುವ ಬೆದರಿಕೆ ಹಾಕಿ ಅತ್ಯಾಚಾರವೆಸಗಿದ್ದ.
ಫೆ 6 ಹಾಗೂ ಫೆ 21ರಂದು ಸಹ ಬೋನವೆಂಚರ್ ಫರ್ನಾಂಡಿಸ್ ಅತ್ಯಾಚಾರವೆಸಗಿದ್ದು, ಅದಾಗಿಯೂ ಆ ಅಶ್ಲೀಲ ಫೋಟೋಗಳನ್ನು ಪ್ರಾಂಕ್ ಫರ್ನಾಂಡಿಸ್ ಎಂಬಾತರ ಮೊಬೈಲಿಗೆ ಕಳುಹಿಸಿದ್ದ. ಅದಾದ ಮೇಲೆ ಸಂತ್ರಸ್ತೆಯ ಚಿತ್ರಗಳನ್ನು ವಾಟ್ಸಪ್ ಸ್ಟೇಟಸ್’ಗೆ ಹಾಕಿ ಬಾಲಕಿಯ ಮಾನ ಹರಾಜು ಮಾಡಿದ್ದ.
ಈ ಎಲ್ಲಾ ವಿದ್ಯಮಾನಗಳ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. 17 ಸಾಕ್ಷಿ ವಿಚಾರಣೆ ನಡೆಸಿ 38 ದಾಖಲೆಗಳನ್ನು ಹಾಜರುಪಡಿಸಿದ್ದರು. 1 ಮೊಬೈಲನ್ನು ಸಹ ವಶಕ್ಕೆ ಪಡೆದಿದ್ದರು. ಸರ್ಕಾರಿ ಅಭಿಯೋಜಕಿ ಶುಭ ಆರ್ ಗಾಂವ್ಕರ್ ಹಾಗೂ ತನುಜಾ ಹೊಸಪಟ್ಟಣ ಅವರು ಈ ಪ್ರಕರಣದಲ್ಲಿ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ವಾದಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಬೋನವೆಂಚರ್ ಫನಾಂಡಿಸ್’ಗೆ 21 ವರ್ಷ ಜೈಲು ಹಾಗೂ 1.5 ಲಕ್ಷ ರೂ ದಂಡ ವಿಧಿಸಿದೆ.