ಕಾರವಾರ: ಜೋರಾಗಿ ಸಂಚರಿಸುತ್ತಿದ್ದ ಬೈಕಿಗೆ ಜಾನುವಾರು ಅಡ್ಡ ಸಿಕ್ಕಿದ್ದು, ಅಪಘಾತಕ್ಕೆ ಒಳಗಾದ ಬೈಕು ಬೆಂಕಿಗೆ ಆಹುತಿಯಾಗಿದೆ. ಬೈಕು ಹೊತ್ತಿ ಉರಿಯುತ್ತಿರುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗೋವಾದ ವಾಸ್ಕೋ ಆಯೀಶ್ ಗಡೇಕರ್ ಭಾನುವಾರ ಅಂಕೋಲಾದಿAದ ಕಾರವಾರ ಕಡೆ ತಮ್ಮ ರಾಯಲ್ ಎನ್ಫಿಲ್ಡ್ ಬೈಕ್ ಓಡಿಸುತ್ತಿದ್ದರು. ತೋಡೂರು ಬಳಿ ಅವರ ಬೈಕಿಗೆ ದನ ಅಡ್ಡ ಬಂದಿತು. ಬೈಕ್ ನಿಯಂತ್ರಿಸಲಾಗದೇ ಅವರು ದನಕ್ಕೆ ಬೈಕ್ ಗುದ್ದಿದರು. ಅದಾದ ನಂತರ ರಸ್ತೆಗೆ ಬಿದ್ದ ಬೈಕು ಬಹುದೂರದವರೆಗೆ ಸವರಿಕೊಂಡು ಹೋಗಿದ್ದು, ಇಲ್ಲಿ ಉಂಟಾದ ಘರ್ಷಣೆಯಿಂದ ಬೆಂಕಿ ಕಾಣಿಸಿಕೊಂಡಿತು.
ಬೈಕಿನ ಟಾಕಿಯ ತುಂಬ ಪೆಟ್ರೋಲ್ ಇದ್ದ ಕಾರಣ ಆ ಬೆಂಕಿ ಇಡೀ ಬೈಕನ್ನು ಆವರಿಸಿಕೊಂಡಿತು. ಕ್ಷಣ ಮಾತ್ರದಲ್ಲಿ ಪೂರ್ತಿ ಬೈಕ್ ಅಗ್ನಿಗೆ ಆಹುತಿಯಾಯಿತು. ಬೈಕಿನಿಂದ ಬಿದ್ದ ಪರಿಣಾಮ ಆಯೀಷ್ ಗಡೇಕರ್ ಅವರಿಗೆ ಪೆಟ್ಟಾಗಿದ್ದರೂ, ಬೆಂಕಿ ಅನಾಹುತದಿಂದ ಅವರು ಬಚಾವಾದರು.