`ನಿನಗೆ ಒಂದು ಗತಿ ಕಾಣಿಸುತ್ತೇನೆ’ ಎಂದು ಬೆದರಿಕೆ ಒಡ್ಡಿದ ಇಬ್ಬರ ವಿರುದ್ಧ ನ್ಯಾಯಾಲಯದ ಮೊರೆ ಹೋಗಿ ಪೊಲೀಸ್ ಪ್ರಕರಣ ದಾಖಲಿಸುವ ಮೂಲಕ ಬಿಜೆಪಿ ಮುಖಂಡರೊಬ್ಬರು ಎದುರಾಳಿಗೆ ಬಿಸಿ ಮುಟ್ಟಿಸಿದ್ದಾರೆ.
ಕಾರವಾರದ ಸೋನಾರವಾಡದ ವಿವೇಕಾನಂದ ಬಾಯ್ಕೇರಿಕರ್ (72) ಅವರು ದೀಪಕ ಅಣ್ವೇಕರ್ ಹಾಗೂ ಅವರ ಕೆಲಸಗಾರ ರವಿ ವಿರುದ್ಧ ದೂರು ನೀಡಿದ್ದಾರೆ. ವಿವೇಕಾನಂದ ಬಾಯ್ಕೇರಿಕರ್ ಹಾಗೂ ದೀಪಕ ಅಣ್ವೇಕರ್ ಅವರ ನಡುವೆ ಭೂಮಿ ವಿಷಯವಾಗಿ ವಾಗ್ವಾದ ನಡೆದಿದ್ದು, ಅದು ಹೊಡೆದಾಟದ ಸ್ವರೂಪ ಪಡೆದಿದೆ.
ಫೆ 1ರಂದು ಮಹಾಸತಿ ಕಲ್ಯಾಣ ಮಂಟಪದ ಮ್ಯಾನೇಜರ್ ಸಾಯಿನಾಥ ಅವರ ಜೊತೆ ಸೇರಿ ಕಲ್ಯಾಣ ಮಂಟಪದ ಹಿಂದಿರುವ ಸ್ವಂತ ಭೂಮಿಗೆ ವಿವೇಕಾನಂದ ಬಾಯ್ಕೇರಿಕರ್ ಬೇಲಿ ಅಳವಡಿಸುತ್ತಿದ್ದರು. ಆಗ ಅಲ್ಲಿಗೆ ಬಂದ ದೀಪಕ ಅಣ್ವೇಕರ್ ಹಾಗೂ ಅವರ ಕೆಲಸಗಾರ ರವಿ ಜಗಳ ತೆಗೆದರು. ಈ ಇಬ್ಬರು ಸೇರಿ ವಿವೇಕಾನಂದ ಬಾಯ್ಕೇರಿಕರ್ ಅವರನ್ನು ನಿಂದಿಸಿ ದೂಡಿದರು. ಅವರು ನೆಲಕ್ಕೆ ಬೀಳಿಸಿ ಗಾಯವಾಗುವಂತೆ ಮಾಡಿದರು.
ಈ ವಿಷಯವಾಗಿ ವಿವೇಕಾನಂದ ಬಾಯ್ಕೇರಿಕರ್ ಅವರು ಪೊಲೀಸರಿಗೆ ದೂರಿದ್ದರು. ಆದರೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ನ್ಯಾಯಾಲಯದಿಂದ ಅನುಮತಿ ತರುವಂತೆ ಸಲಹೆ ನೀಡಿದ್ದರು. ಅದರ ಪ್ರಕಾರ ನ್ಯಾಯಾಲಯದ ಮೊರೆ ಹೋಗಿ ಅವರು ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ. ವಿವೇಕಾನಂದ ಬಾಯ್ಕೇರಿಕರ್ ಅವರು ಬಿಜೆಪಿ ನಾಯಕರಾಗಿದ್ದು, ಈಚೆಗೆ ಸಕ್ರೀಯ ರಾಜಕಾರಣದಿಂದ ದೂರವುಳಿದಿದ್ದಾರೆ.