ಶಿರಸಿಯಿಂದ ಬೆಳಗಾವಿಗೆ ಸಂಚರಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ಸು ಮಂಗಳವಾರ ಯಲ್ಲಾಪುರ ತಾಲೂಕಿನ ಕಣ್ಣಿಗೇರಿ ಬಳಿ ಅಪಘಾತವಾಗಿದೆ. ಬಸ್ಸು ರಸ್ತೆ ಅಂಚಿನ ಮರಕ್ಕೆ ಗುದ್ದಿದ ರಭಸಕ್ಕೆ ಮರ ಎರಡು ತುಂಡಾಗಿದ್ದು, ಬಸ್ಸಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಬಸ್ಸು ಅಪಘಾತದ ವಿಷಯ ಗೊತ್ತಾದ ತಕ್ಷಣ ಯಲ್ಲಾಪುರ ಸರ್ಕಾರಿ ಆಸ್ಪತ್ರೆಯ 2 ಹಾಗೂ 108ನ ಒಂದು ಆಂಬುಲೆನ್ಸ ಚಾಲಕರು ಸ್ಥಳಕ್ಕೆ ಧಾವಿಸಿದರು. 3 ಆಂಬುಲೆನ್ಸ ಮೂಲಕ 15ಕ್ಕೂ ಅಧಿಕ ಪ್ರಯಾಣಿಕರನ್ನು ತುರ್ತಾಗಿ ಆಸ್ಪತ್ರೆಗೆ ಸೇರಿಸಿದರು. ಬಸ್ ಅಪಘಾತ ನಡೆದ ಬಗ್ಗೆ ಫೋನ್ ಬಂದ ಆರು ನಿಮಿಷದೊಳಗೆ ಮೂರು ಆಂಬುಲೆನ್ಸಿನವರು ಸ್ಥಳದಲ್ಲಿದ್ದರು.
ಅಪಘಾತದ ವಿಷಯದ ಬಗ್ಗೆ ಸರ್ಕಾರಿ ಆಸ್ಪತ್ರೆ ಆಂಬುಲೆನ್ಸ ಚಾಲಕ ಪವನ್ ಕಾಮತ್ ಆಸ್ಪತ್ರೆಗೆ ವಿಷಯ ಮುಟ್ಟಿಸಿ ಅಗತ್ಯ ಚಿಕಿತ್ಸೆಗೆ ಸಿದ್ದವಾಗಿರುವಂತೆ ಕೋರಿದ್ದರು. ಹೀಗಾಗಿ ಗಾಯಾಳು ಆಸ್ಪತ್ರೆ ತಲುಪಿದ ತಕ್ಷಣ ಅವರ ಆರೈಕೆಗೆ ಅನುಕೂಲವಾಯಿತು. ಪವನ್ ಕಾಮತ್ ಅವರೊಂದಿಗೆ ಸರ್ಕಾರಿ ಆಸ್ಪತ್ರೆಯ ಇನ್ನೊಂದು ಆಂಬುಲೆನ್ಸ ಚಾಲಕ ಮಾರುತಿ ತಿನ್ನೇಕರ್ ಸಹ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು. 108 ಆಂಬುಲೆನ್ಸ ಚಾಲಕ ಸುಭಾಷ್ ನಾಯ್ಕ ಹಾಗೂ ಆರೈಕೆದಾರ ಮಂಜು ಸೇರಿ ರೋಗಿಗಳಿಗೆ ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಿದರು. ಆಂಬುಲೆನ್ಸಿನ ಒಳಗಿದ್ದ ಪ್ರಥಮ ಚಿಕಿತ್ಸಾ ಪೆಟ್ಟಿಗೆ ತುರ್ತು ಉಪಚಾರಕ್ಕೆ ಪ್ರಯಾಣಿಕರಿಗೆ ನೆರವಾದವು.
ಇನ್ನೂ ಬೆಳಗ್ಗೆ 6.30ಕ್ಕೆ ಈ ಬಸ್ಸು ಶಿರಸಿಯಿಂದ ಹೊರಟಿತ್ತು. ಬಸ್ಸಿನ ಸಂಖ್ಯೆ ಕಡಿಮೆಯಿರುವ ಕಾರಣ ಆಸನಗಳಿಗಿಂತಲೂ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಬಸ್ಸಿನಲ್ಲಿದ್ದರು. ಯಲ್ಲಾಪುರ ಬಸ್ ನಿಲ್ದಾಣದಲ್ಲಿ ಕೆಲ ಪ್ರಯಾಣಿಕರು ಇಳಿದರೆ, ಅಷ್ಟೇ ಪ್ರಮಾಣದ ಪ್ರಯಾಣಿಕರು ಬಸ್ಸು ಹತ್ತಿದರು. ಕಣ್ಣಿಗೇರಿ ತಲುಪುವ ಮುನ್ನ ಆ ಬಸ್ಸು ಅಪಘಾತಕ್ಕೀಡಾಯಿತು. ಬಸ್ಸಿನ ಚಾಲಕ ಹಾಗೂ ಮಹಿಳಾ ಪ್ರಯಾಣಿಕರೊಬ್ಬರಿಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಗಿದ್ದು, ಅವರು ಖಾಸಗಿ ವಾಹನದ ಮೂಲಕ ಆಸ್ಪತ್ರೆಗೆ ಬಂದಿದ್ದರು. ಅದಾದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವರಿಬ್ಬರು ಹುಬ್ಬಳ್ಳಿಗೆ ತೆರಳಿದರು.