ಅಂಕೋಲಾದ ಜೀವನಕುಮಾರ ನಾಯಕ ಅವರು ಸ್ನೇಹಿತನ ಮದುವೆ ಬಳಕೆಗೆ ಕಾರು ಕೊಟ್ಟಿದ್ದು, ಆ ಕಾರನ್ನು ಮರಳಿ ಪಡೆಯಲಾಗದೇ ಸಮಸ್ಯೆಗೆ ಸಿಲುಕಿದ್ದಾರೆ. ಇದೀಗ ಅವರ ಕಾರು ಮರಳಿ ಸಿಕ್ಕಿಲ್ಲ. ಆ ಸ್ನೇಹಿತನೂ ಪತ್ತೆಯಿಲ್ಲ!
ಜೀವನಕುಮಾರ ನಾಯಕ (31) ಅವರು ಅಂಕೋಲಾದ ಕೋಟೆವಾಡದಲ್ಲಿ ವ್ಯಾಪಾರಿ. ದಾವಣಗೆರೆಯ ಹರಿಹರದಲ್ಲಿರುವ ಅವರ ಸ್ನೇಹಿತ ಸಯ್ಯದ ಪರ್ಹಾನ್ (32) ಅವರ ಕಾರು ಪಡೆದು ಮರಳಿಸುತ್ತಿಲ್ಲ. ಮೊದಲು `ನಾಳೆ ಕೊಡುವೆ.. ನಾಡಿದ್ದು ಕೊಡುವೆ’ ಎನ್ನುತ್ತಿದ್ದ ಸಯ್ಯದ್ ಇದೀಗ `ಕಾರು ಇಲ್ಲ.. ನಾನು ಸಿಗಲ್ಲ’ ಎನ್ನುತ್ತಿದ್ದಾರೆ. ಹರಿಹರಕ್ಕೆ ಹೋಗಿ ಹುಡುಕಿದರೂ ಸಹ ಕಾರಿನ ಸುಳಿವು ಸಿಗದೇ ಜೀವನಕುಮಾರ ನಾಯಕ ಪೊಲೀಸರ ಮೊರೆ ಹೋಗಿದ್ದಾರೆ.
2025ರ ಜನವರಿ ಮೊದಲ ವಾರ ಸಯ್ಯದ್ ಫೋನ್ ಮಾಡಿ `ಮದುವೆ ಕಾರ್ಯಕ್ರಮಕ್ಕೆ ಕಾರು ಬೇಕು’ ಎಂದು ಕೇಳಿದ್ದರು. ಉದಾರ ಮನಸ್ಸಿನ ಜೀವನಕುಮಾರ್ ಮರು ಮಾತನಾಡದೇ ಕಾರು ಕೊಟ್ಟು ಕಳುಹಿಸಿದ್ದರು. ಮದುವೆ ಮುಗಿದು 1 ವಾರದ ನಂತರ ಕಾರು ಮರಳಿಸುವಂತೆ ಸಯ್ಯದ್’ಗೆ ಜೀವನಕುಮಾರ ಫೋನ್ ಮಾಡಿದ್ದರು. `ಎರಡೇ ದಿನದಲ್ಲಿ ಕೊಟ್ಟುಬಿಡುವೆ’ ಎಂದು ಸಯ್ಯದ್ ಉತ್ತರಿಸಿದ್ದರಿಂದ ಸುಮ್ಮನಾಗಿದ್ದರು.
ಆದರೆ, ಎರಡು ದಿನವಲ್ಲ. ಒಂದು ವಾರ ಕಳೆದರೂ ಆ ಕಾರು ಅಂಕೋಲಾಗೆ ಬರಲಿಲ್ಲ. ಇದಾದ ನಂತರ ಮತ್ತೆ ಮತ್ತೆ ಜೀವನಕುಮಾರ ನಾಯಕ ಫೋನ್ ಮಾಡಿದರು. ಆ ಕಡೆಯಿಂದ ಮಾತನಾಡಿದ ಸಯ್ಯದ್ ಕಾರು ಮರಳಿಸಲು ಮತ್ತಷ್ಟು ಸಮಯಾವಕಾಶ ಕೇಳಿದರು. ಅದಕ್ಕೂ ಜೀವನಕುಮಾರ್ ಒಪ್ಪಿಗೆ ಸೂಚಿಸಿದರು. ಅದಾದ ನಂತರ ಮತ್ತೆ ಫೋನ್ ಮಾಡಿದಾಗ `ಹರಿಹರಕ್ಕೆ ಬಂದು ಕಾರು ಪಡೆದು ಹೋಗು’ ಎಂದು ಸಯ್ಯದ್ ಉತ್ತರಿಸಿದರು. ಅದರ ಪ್ರಕಾರ ಜನವರಿ 21ರಂದು ಜೀವನಕುಮಾರ ಹರಿಹರಕ್ಕೆ ಹೋದಾಗ ಅಲ್ಲಿ ಕಾರು ಇರಲಿಲ್ಲ.
ಆಗ ಸಯ್ಯದ್, `ಸಂಬoಧಿಕರನ್ನು ವಿಮಾನ ನಿಲ್ದಾಣಕ್ಕೆ ಬಿಡಲು ಕಾರನ್ನು ಮುಂಬೈಗೆ ಕಳುಹಿಸಿದ್ದೇನೆ. ಮೂರು ದಿನ ಬಿಟ್ಟು ಮತ್ತೆ ಬಾ’ ಎಂದು ಉತ್ತರಿಸಿದರು. ಹೀಗಾಗಿ ಜನವರಿ 24ಕ್ಕೆ ಜೀವನಕುಮಾರ ಮತ್ತೆ ಹರಿಹರಕ್ಕೆ ಹೋಗಿ ಕಾರು ಹುಡುಕಿದರು. ಆಗಲೂ ಅವರಿಗೆ ಕಾರು ಸಿಗಲಿಲ್ಲ. ಸಯ್ಯದ್ ಮನೆ ಹುಡುಕಿ ಹೊರಟರು. ಅಲ್ಲಿ ಸ್ನೇಹಿತ ಸಯ್ಯದ್ ಸಹ ಇರಲಿಲ್ಲ.
ಕೂಡಲೇ ಸಯ್ಯದ್’ಗೆ ಜೀವನಕುಮಾರ್ ನಾಯಕ ಫೋನ್ ಮಾಡಿದರು. ಆಗಲೂ ಸಯ್ಯದ್ ಫೋನ್ ಸ್ವೀಕರಿಸಲಿಲ್ಲ. ಇದರಿಂದ ಸಿಟ್ಟಾದ ಜೀವನಕುಮಾರ್ ಅಂಕೋಲಾಗೆ ಮರಳಿ ಪೊಲೀಸ್ ಠಾಣೆಗೆ ತೆರಳಿದರು. ತಮಗೆ ಆದ ಅನ್ಯಾಯದ ಬಗ್ಗೆ ವಿವರವಾದ ವರದಿ ಒಪ್ಪಿಸಿದರು. ಕಾರು ಮರಳಿಸದ ಸ್ನೇಹಿತನ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿ, ಕಾರು ಹುಡುಕಿಕೊಡುವಂತೆ ಕೋರಿದರು. ಇದೀಗ ಪೊಲೀಸರು ಸಹ ಸಯ್ಯದ್ ಜೊತೆ ಆ ಕಾರಿನ ಹುಡುಕಾಟ ನಡೆಸಿದ್ದಾರೆ.