ಜೀವನದಲ್ಲಿ ಜಿಗುಪ್ಸೆ ಹೊಂದಿದ ಶಿರಸಿಯ ಗುತ್ತಿಗೆದಾರ ಅಬ್ದುಲ್ ಬಶೀರ ಶೇಖ್ (57) ಆತ್ಮಹತ್ಯೆಗೆ ಶರಣಾಗಿದ್ದಾರೆ.
ಶಿರಸಿ ಇಂದಿರಾನಗರದಲ್ಲಿ ಅವರು ವಾಸವಾಗಿದ್ದರು. ಈಚೆಗೆ ಬೇಸರದಲ್ಲಿರುತ್ತಿದ್ದ ಅವರು `ನನಗೆ ಈ ಜೀವನ ಬೇಡ’ ಎಂದು ಹೇಳಿಕೊಳ್ಳುತ್ತಿದ್ದರು. ಇದನ್ನು ಅರಿತ ಅವರ ಮಗ ರಶೀದ ಶೇಖ್ ಸಮಾಧಾನ ಮಾಡಿದ್ದರು. ಈ ನಡುವೆ ಏಪ್ರಿಲ್ 3ರಂದು ಶಿರಸಿ ಕೆರೆಕೊಪ್ಪದಲ್ಲಿನ ಅಕ್ಕನ ಮಗಳ ಮನೆಗೆ ಹೋಗಿದ್ದರು. ಅಲ್ಲಿ ಫರ್ಜಾನ್ ಅಬ್ದುಲ್ ಕರೀಂ ಅವರ ಮನೆಗೆ ಭೇಟಿ ನೀಡಿದ್ದರು.
ಆ ಪ್ರದೇಶದಲ್ಲಿ ಮನೆ ಕಟ್ಟುವ ಕೆಲಸ ನೋಡುತ್ತಿದ್ದ ಅಬ್ದುಲ್ ಬಶೀರ ಶೇಖ್ ಅವರಿಗೆ ಹೊಸಮನೆಯ ನೆಲಕ್ಕೆ ಹಾಕಲು ತಂದಿದ್ದ ಕ್ರಿಮಿನಾಶಕ ಕಾಣಿಸಿತು. ಕೂಡಲೇ ಅದನ್ನು ಸೇವಿಸಿ ಅಸ್ವಸ್ಥರಾದರು. ಅಬ್ದುಲ್ ಬಶೀರ ಶೇಖ್ ಅವರನ್ನು ರೋಟರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅದಾದ ನಂತರ ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಅಲ್ಲಿ ಚೇತರಿಕೆ ಕಾಣದ ಕಾರಣ ಏಪ್ರಿಲ್ 18ರಂದು ಮತ್ತೆ ಶಿರಸಿಗೆ ಕರೆತರುವಾಗ ಉಸಿರಾಟದ ಸಮಸ್ಯೆ ಕಾಣಿಸಿತು. ಕೂಡಲೇ ಅವರನ್ನು ಕುಟುಂಬದವರು ಶಿರಸಿ ಸರ್ಕಾರಿ ಆಸ್ಪತ್ರೆಗೆ ಕರೆತಂದರು. ಆದರೆ, ಅಷ್ಟರೊಳಗೆ ಅಬ್ದುಲ್ ಬಶೀರ ಶೇಖ್ ಸಾವನಪ್ಪಿದ್ದರು.
ಮೂರ್ಚೆ ರೋಗ: ಬಾವಿಗೆ ಬಿದ್ದ ಮಹಿಳೆ ಸಾವು
ಮೂರ್ಚೆ ರೋಗದಿಂದ ಬಳಲುತ್ತಿದ್ದ ಗೋಕರ್ಣ ಬಳಿಯ ಮಾದನಗೇರಿ ದರ್ಶನಾ ನಾಯ್ಕ ಅವರು ಈ ದಿನ ಸಾವನಪ್ಪಿದ್ದಾರೆ.
ಕಳೆದ ಎರಡು ವರ್ಷಗಳಿಂದ ದರ್ಶನಾ ನಾಯ್ಕ (30) ಅವರು ಮೂರ್ಚೆ ರೋಗಕ್ಕೆ ಒಳಗಾಗಿದ್ದರು. ಇದರಿಂದ ಮಾನಸಿಕವಾಗಿ ಸಹ ಅವರು ಕುಗ್ಗಿದ್ದರು. ಶುಕ್ರವಾರ ಮಾದನಗೇರಿಯ ವಿಜಯಬಾಯಿ ಪೈ ಅವರ ಮನೆ ಬಳಿ ದರ್ಶನಾ ನಾಯ್ಕ ಅವರು ತೆರಳಿದ್ದರು. ಅಲ್ಲಿನ ಬಾವಿಯಿಂದ ನೀರು ಮೇಲೆತ್ತುವಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದರು. ಅವರನ್ನು ಮೇಲೆತ್ತುವಾಗ ಶವವಾಗಿದ್ದರು. ಈ ಬಗ್ಗೆ ದರ್ಶನಾ ನಾಯ್ಕ ಅವರ ಸಹೋದರ ಲೋಹಿತ ನಾಯ್ಕ ಪೊಲೀಸರಿಗೆ ತಿಳಿಸಿ, ಪ್ರಕರಣ ದಾಖಲಿಸಿದ್ದಾರೆ.
ಕ್ರಿಮಿನಾಶಕ ಸೇವಿಸಿದ ನಿವೃತ್ತ ನೌಕರ: ಸಾವು!
ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದ ಕಾರವಾರದ ಅಶೋಕ ಗುನಗಿ ಕ್ರಿಮಿನಾಶಕ ಸೇವಿಸಿ ಸಾವನಪ್ಪಿದ್ದಾರೆ.
ಕಾರವಾರದ ಬಿಣಗಾದಲ್ಲಿನ ಗುನಗಿವಾಡದಲ್ಲಿ ಅಶೋಕ ಗುನಗಿ ವಾಸವಾಗಿದ್ದರು. ಏಪ್ರಿಲ್ 17ರಂದು ರಾತ್ರಿ 11ಗಂಟೆಗೆ ಅವರು ಎಲ್ಲರ ಜೊತೆ ಊಟ ಮಾಡಿ ಮಲಗಿದ್ದರು. ಬೆಳಗ್ಗೆ ಮೇಲೆ ಏಳಲು ಆಗದೇ ಹಾಸಿಗೆಯಲ್ಲಿ ಒದ್ದಾಡುತ್ತಿದ್ದರು.
ಇದನ್ನು ನೋಡಿದ ಅವರ ಮಗ ಅಕ್ಷಯ ಗುನಗಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದರು. ಪರೀಕ್ಷಿಸಿದ ವೈದ್ಯರು `ಅಶೋಕ ಗುನಗಿ ವಿಷ ಸೇವಿಸಿದ್ದಾರೆ’ ಎಂದು ತಿಳಿಸಿದರು. ಅಕ್ಷಯ ಗುನಗಿ ಅವರು ಮನೆಗೆ ಬಂದು ನೋಡಿದಾಗ ಮನೆ ಹಿಂದೆ ಕ್ರಿಮಿನಾಶಕದ ಬಾಟಲಿ ಸಿಕ್ಕಿತು. ಇದನ್ನು ಅರಿತ ವೈದ್ಯರು ಅಶೋಕ ಗುನಗಿ ಅವರಿಗೆ ವಾಂತಿ ಮಾಡಿಸಿದರು.
ಅದಾದ ನಂತರ ಚಿಕಿತ್ಸೆ ಮುಂದುವರೆಸಿದರು. ಆದರೆ, ಪ್ರಯೋಜನಕ್ಕೆ ಬರಲಿಲ್ಲ. ಏಪ್ರಿಲ್ 18ರಂದು ಅವರು ಸಾವನಪ್ಪಿದರು.