ಕುಮಟಾ: ಗೋಕರ್ಣ ಆರೋಗ್ಯ ಕೇಂದ್ರದ ಪ್ರವೇಶ ದ್ವಾರದಲ್ಲಿದ್ದ ಪಂಚಲೋಹದ ಗೌತಮ ಬುದ್ದನ ವಿಗ್ರಹ ಇದೀಗ ಅಲ್ಲಿಲ್ಲ. `ಆ ವಿಗ್ರಹ ಕದ್ದಿರುವ ವ್ಯಕ್ತಿ ವಿರುದ್ಧ ಕ್ರಮ ಜರುಗಿಸುವ ಜೊತೆ ಮೂರ್ತಿಯನ್ನು ಪುನಃ ಅದೇ ಜಾಗದಲ್ಲಿ ಸ್ಥಾಪಿಸಬೇಕು’ ಎಂದು ತಲಗೇರಿಯ ಗಣೇಶ ನಾಯಕ ವಿವಿಧ ಕಡೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಬ್ರಿಟೀಷರ ಕಾಲದಲ್ಲಿ ಗೋಕರ್ಣ ಸೀಮೆಯ ನಾಡಕರ್ಣಿ ಕುಟುಂಬದವರು ಪಂಚಲೋಹದ ಬುದ್ದನ ವಿಗ್ರಹವನ್ನು ದಾನವಾಗಿ ನೀಡಿದ್ದರು. 2005ರವರೆಗೂ ಆ ವಿಗ್ರಹ ಆರೋಗ್ಯ ಕೇಂದ್ರದ ಪ್ರವೇಶ ದ್ವಾರದಲ್ಲಿದ್ದು, ನಂತರ ಅದನ್ನು ರವೀಂದ್ರ ಜೋಶಿ ಎಂಬಾತರು ಕೊಂಡೊಯ್ದಿದ್ದರು. ಬೆಲೆ ಬಾಳುವ ವಿಗ್ರಹವನ್ನು ಯಾವುದೇ ನಿಯಮ ಪಾಲಿಸದೇ ಅನ್ಯರ ಪಾಲಿಗೆ ನೀಡಿರುವ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿದ್ದವು. ವಾರ್ಷಿಕ ಆಡಿಟ್ ವರದಿಯಲ್ಲಿ ಸಹ ಮೂರ್ತಿ ಕಣ್ಮರೆಯ ವಿಷಯ ಪ್ರಸ್ತಾಪವಾಗಿತ್ತು.
`ಪುರಾತನ ಕಾಲದ ಬುದ್ದನ ವಿಗ್ರಹ ಪಂಚಲೋಹದಿAದ ಕೂಡಿದ್ದು, ಅದಕ್ಕೆ ಕೋಟಿ ಲೆಕ್ಕಾಚಾರದಲ್ಲಿ ಬೆಲೆಯಿದೆ. 4 ಅಡಿ ಉದ್ದದ ಈ ವಿಗ್ರಹ ಕಳ್ಳತನವಾದರೂ ಸುಮ್ಮನಿರುವುದು ಸರಿಯಲ್ಲ’ ಎಂಬುದು ಗಣೇಶ ನಾಯಕ ಅವರ ಆಗ್ರಹ. `ಡಾ ರಾಘವೇಂದ್ರ ಹೆಬ್ಬಾರ್ ಎಂಬಾತರು ನಿಯಮಗಳನ್ನು ಮೀರಿ ಆ ವಿಗ್ರಹವನ್ನು ರವೀಂದ್ರ ಜೋಶಿ ಎಂಬಾತರಿಗೆ ನೀಡಿದ್ದಾರೆ. ಇದೀಗ ರವೀಂದ್ರ ಜೋಶಿ ಅವರು ಆ ವಿಗ್ರಹದ ಬದಲು ಬೇರೆ ವಿಗ್ರಹ ನೀಡುವ ವಿಚಾರದಲ್ಲಿದ್ದು, ಅದೇ ವಿಗ್ರಹವನ್ನು ಹಿಂಪಡೆಯುವ ಬಗ್ಗೆ 2006 ಹಾಗೂ 2016ರ ಆಡಿಟ್ ವರದಿಯಲ್ಲಿಯೂ ಉಲ್ಲೇಖಿಸಲಾಗಿದೆ. ಅದಾಗಿಯೂ ಮೂರ್ತಿಯನ್ನು ಸರ್ಕಾರ ಹಿಂಪಡೆದಿಲ್ಲ’ ಎಂದವರು ದೂರಿದ್ದಾರೆ.
`ಪಂಚಲೋಹದ ಮೂರ್ತಿ ಬದಲಾಗಿ ಅನುಪಯುಕ್ತ ಹಿತ್ತಾಳೆಯ ಮೂರ್ತಿ ಎಂದು ಕೆಲ ದಾಖಲೆಯಲ್ಲಿ ನಮೂದಿಸಿದ್ದು, ಅದನ್ನು ಬದಲಾಯಿಸುವ ಬಗ್ಗೆ ರವೀಂದ್ರ ಜೋಶಿಯವರು ಲಿಖಿತ ಹೇಳಿಕೆ ನೀಡಿದ್ದಾರೆ. ಆದರೆ, ಮೂಲ ವಿಗ್ರಹದ ಬದಲಾವಣೆ ಅಥವಾ ವಿಲೇವಾರಿ ಮಾಡುವ ಅಧಿಕಾರ ಅವರಿಗಿಲ್ಲ’ ಎಂದು ಗಣಪತಿ ನಾಯ್ಕ ಸರ್ಕಾರಕ್ಕೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.