ಮುಂಡಗೋಡ: ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಜೂನಿಯರ್ ಕಾಲೇಜ್ ಹಾಗೂ ಹಳೂರ ಶಾಲೆಗೆ ಭೇಟಿ ನೀಡಿ ಪಾಠ ಮಾಡಿದರು. 6 ಹಾಗೂ 10ನೇ ತರಗತಿಯಲ್ಲಿರುವ ವಿದ್ಯಾರ್ಥಿಗಳ ಜೊತೆ ಚರ್ಚಿಸಿದರು. ಇದೇ ಮೊದಲ ಬಾರಿಗೆ ಅವರು ಮುಂಡಗೋಡಿಗೆ ಭೇಟಿ ನೀಡಿದ್ದರಿಂದ ವಿವಿಧ ಇಲಾಖೆಯವರು ಅವರನ್ನು ಸ್ವಾಗತಿಸಿದರು. ವಿವಿಧ ಇಲಾಖೆ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸರಣಿ ಕಳ್ಳತನ: ಕಿರಾಣಿ ಔಷಧಿ ಜೊತೆ ಸರಾಯಿ ಅಂಗಡಿ ದೋಚಿದ ಕಳ್ಳರು!
ದಾಂಡೇಲಿ: ಔಷಧಿ ಅಂಗಡಿಗೆ ನುಗ್ಗಿದ ಕಳ್ಳರು ಅಲ್ಲಿದ್ದ 4.67 ಲಕ್ಷ ರೂ ಹಣ ದೋಚಿ ಪರಾರಿಯಾಗಿದ್ದಾರೆ. ಇದರೊಂದಿಗೆ ಮಳಿಗೆಯಲ್ಲಿದ್ದ 55 ಗ್ರಾಂ ಚಿನ್ನ ಸಹ ಕಳ್ಳರ ಪಾಲಾಗಿದೆ. ಔಷಧಿ ಅಂಗಡಿಯಲ್ಲಿದ್ದ ಸಿಸಿ ಕ್ಯಾಮರಾ ಹಾಗೂ ಡಿವಿಆರ್’ನ್ನು ಕಳ್ಳರು ಅಪಹರಿಸಿದ್ದಾರೆ.
ಗಾಂಧಿಚೌಕದಲ್ಲಿ ಪ್ರೀಯಾ ಇಂದ್ರಜೀತ್ ಕಾಳೆ ಅವರು ಔಷಧಿ ಅಂಗಡಿ ನಡೆಸುತ್ತಿದ್ದರು. ಈ ಅಂಗಡಿ ಪ್ರವೇಶಿಸಿದ ಕಳ್ಳರು ಸಿಕ್ಕಿದ್ದನ್ನೆಲ್ಲ ದೋಚಿ ನಂತರ ಪಕ್ಕದಲ್ಲಿದ್ದ ಶರಣಬಸಪ್ಪ ಅರಳಿ ಹಾಗೂ ಕಿರಣ್ ಗಾವಡೆ ಅವರ ಕಿರಾಣಿ ಅಂಗಡಿಗೆ ನುಗ್ಗಿದ್ದಾರೆ. ಇದಾದ ನಂತರ ಆ ಅಂಗಡಿಯ ಮುಂದಿರುವ ವಿಷ್ಣು ರಾಮಚಂದ್ರ ಕಲಾಲ್ ಅವರ ಬಾರಿಗೆ ನುಗ್ಗಿ ಮದ್ಯದ ಬಾಟಲಿ ಅಪಹರಿಸಿದ್ದಾರೆ.
ಕಾಂಗ್ರೆಸ್ ಸೇವಾದಳಕ್ಕೆ ಮಂಜುನಾಥ ಮುಕ್ರಿ
ಹೊನ್ನಾವರ: ಹಳದೀಪುರ ಗ್ರಾಮದ ಮಂಜುನಾಥ ರಾಮಾ ಮುಕ್ರಿ ಇವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳ ವಿಭಾಗದ ರಾಜ್ಯ ಜಂಟಿ ಕಾರ್ಯದರ್ಶಿಯಾಗಿದ್ದಾರೆ.
ಮಂಜುನಾಥ ಮುಕ್ರಿಯವರು ಈ ಹಿಂದೆ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಸೇವಾದಳ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿದ್ದರು. `ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳಿಗೆ ಬದ್ದರಾಗಿ ಹಾಗೂ ಸೇವಾದಳದ ದೆಯೋದ್ದೇಶಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ಬೇರೆ ರಾಜಕೀಯ ಆಸೆ ಆಮಿಷಗಳಿಗೆ ಒಳಗಾಗದೇ ಸಾಮಾಜಿಕ ಪಿಡುಗುಗಳಿಂದ ದೂರವಿರಬೇಕು’ ಎಂದು ಅವರಿಗೆ ಪಕ್ಷ ಸೂಚಿಸಿದೆ. ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಅವರಿಗೆ ಆದೇಶ ಪತ್ರ ವಿತರಿಸಿದರು.
ಮನುವಿಕಾಸದಿಂದ ಆರೋಗ್ಯ ಶಿಬಿರ
ಅಂಕೋಲಾ: ಮನುವಿಕಾಸ ಸ್ವಯಂ ಸೇವಾ ಸಂಸ್ಥೆ ಸಿದ್ಧಿಸಿರಿ ಗ್ರಾಮೀಣ ಜೀವನೋಪಾಯ ಅಭಿವೃದ್ಧಿ ಸಮಿತಿ ಆಶ್ರಯದಲ್ಲಿ ಡೋಂಗ್ರಿ ಪಂಚಾಯತ್ ವ್ಯಾಪ್ತಿಯ ಕನಕನಹಳ್ಳಿ ಗ್ರಾಮದಲ್ಲಿ ನೈರ್ಮಲ್ಯ ಹಾಗೂ ಆರೋಗ್ಯ ಶಿಬಿರ ನಡೆಯಿತು.
ವಿಧಾನಪರಿಷತ್ ಸದಸ್ಯ ಶಾಂತಾರಾಮ್ ಸಿದ್ದಿ ಕಾರ್ಯಕ್ರಮ ಉದ್ಘಾಟಿಸಿದರು. ಮನು ವಿಕಾಸ ಸಂಸ್ಥೆಯ ಕೆಲಸವನ್ನು ಅವರು ಶ್ಲಾಘಿಸಿದರು. ತಾಲೂಕಾ ವೈದ್ಯಾಧಿಕಾರಿಗಳಾದ ಡಾ. ಜಗದೀಶ್ ನಾಯಕ್, ನಬಾರ್ಡ್ ಜಿಲ್ಲಾ ಪ್ರಬಂಧಕರಾದ ಸುಶೀಲ್ ನಾಯ್ಕ್, ಕಿಸಾನ್ ಸಂಘದ ಅಧ್ಯಕ್ಷರಾದ ಶಿವರಾಮ ಗಾವ್ಕರ್ ಮಾತನಾಡಿದರು.
ಪೊಲೀಸರ ವಿರುದ್ಧ ರೂಪಾಲಿ ಕಿಡಿ
ಕಾರವಾರ: ಬಿಜೆಪಿ ಕಾರ್ಯಕರ್ತರಿಗೆ ಹಿಂಸಿಸುವ ಮೂಲಕ ಕಾಂಗ್ರೆಸ್ ಗೂಂಡಾ ವರ್ತನೆ ತೋರಿದೆ ಎಂದು ಮಾಜಿ ಶಾಸಕಿ ರೂಪಾಲಿ ನಾಯ್ಕ ದೂರಿದ್ದಾರೆ.
`ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಗ್ರಾ ಪಂ ಸದಸ್ಯ ದಿಲೀಪ್ ಮೇಲೆ ದೌರ್ಜನ್ಯ ನಡೆದಿದ್ದು, ಪಿಎಸ್ ಐ ಮಹಾಂತೇಶ ವಿರುದ್ಧ ಕ್ರಮ ಜರುಗಿಸಬೇಕು’ ಎಂದವರು ಆಗ್ರಹಿಸಿದ್ದಾರೆ. `ದಿಲೀಪರನ್ನು ಅನಗತ್ಯವಾಗಿ ಬಂಧಿಸಿ ಠಾಣೆಗೆ ತಂದು ಹಲ್ಲೆ ನಡೆಸಲಾಗಿದೆ. ನಡೆದಾಡಲು ಆಗದ ಅವರನ್ನು ವಿಲ್ಚೇರಿನಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ. ವೈದ್ಯಾಧಿಕಾರಿಗಳು ಸಹ ಸುಳ್ಳು ವರದಿ ನೀಡಿದ್ದಾರೆ’ ಎಂದವರು ದೂರಿದರು. ತಪ್ಪಿತಸ್ಥ ಪೊಲೀಸರ ಮೇಲೆ ಕ್ರಮಕ್ಕೆ ಆಗ್ರಹಿಸಿ ಅವರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಚಿನ್ನದ ಹುಡುಗಿಗೆ ಪೊಲೀಸರ ಸನ್ಮಾನ
ಭಟ್ಕಳ: ವಾಕೊ ಯೂಥ್ ವರ್ಲ್ಡ್ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ -2024 ರಲ್ಲಿ ಭಾರತ ಪ್ರತಿನಿಧಿಸಿ ಚಿನ್ನದ ಪದಕ ಗೆದ್ದ ಧನ್ವಿತಾ ವಾಸು ಮೊಗೇರ ಅವರಿಗೆ ಕರಾವಳಿ ಕಾವಲು ಪಡೆಯ ಪಿಐ ಕುಸುಮಾಧರ ಕೆ ಸನ್ಮಾನಿಸಿದರು.
ಯುರೋಪ ದೇಶದ ಹಂಗೇರಿಯ ಬುಡಾಪೆಸ್ಟ್’ನಲ್ಲಿ ನಡೆದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ 7ರಿಂದ 9 ವರ್ಷ ವಯೋಮಿತಿಯ ಬಾಲಕಿಯರ 18ಕೆಜಿ ಪಾಯಿಂಟ್ ಪೈಟ್ ವಿಭಾಗದಲ್ಲಿ ಧನ್ವಿತಾ ವಾಸು ಮೊಗೇರ ಚಿನ್ನದ ಪದಕ ಗೆದ್ದಿದ್ದಾರೆ. ನಾಗಶ್ರೀ ನಾಯ್ಕ ಹಾಗೂ ಈಶ್ವರ ನಾಯ್ಕ ಅವರಿಗೆ ತರಬೇತಿ ನೀಡಿದ್ದರು.
ಯುಎಇ ರಂಗಸ್ಥಳದಲ್ಲಿ ಯಕ್ಷಯಾಮಿನಿ
ಶಿರಸಿ: ಈ ವರ್ಷದ ಬಡಗುತಿಟ್ಟು ಯಕ್ಷಗಾನ ಯುಎಇ ಯ ತಿರುಗಾಟ ಕಾರ್ಯಕ್ರಮಗಳು ಯಕ್ಷ ಯಾಮಿನಿ ಅಡಿಯಲ್ಲಿ ಸೆ.21ಕ್ಕೆ ದುಬೈಯಲ್ಲಿ ಮತ್ತು ಸೆ. 22 ಕ್ಕೆ ಅಬುಧಾಬಿಯಲ್ಲಿ ರಂಗೇರಲಿದೆ.
21 ರಂದು ಸಂಜೆ 5 ಗಂಟೆಯಿಂದ ದುಬೈಯ ಜೆಮ್ಸ್ ನ್ಯೂ ಮಿಲೇನಿಯಂ ಶಾಲೆ, ಅಲ್ ಖೈಲ್ ಗೇಟ್ ನಲ್ಲಿ ವೀರ ಬರ್ಬರಿಕ ಎಂಬ ಪ್ರಸಂಗವನ್ನು, 22 ರಂದು ಸಂಜೆ 3 ಗಂಟೆಯಿಂದ ಅಬುಧಾಬಿಯ ಜೆಮ್ಸ್ ವರ್ಲ್ಡ್ ಅಕಾಡೆಮಿಯಲ್ಲಿ ಭೀಷ್ಮ ವಿಜಯ ಎಂಬ ಪ್ರಸಂಗವನ್ನು ತಾಯ್ನಾಡಿನ ಪ್ರಬುದ್ಧ ಯಕ್ಷಗಾನ ಕಲಾವಿದರು, ಸ್ಥಳೀಯ ಕಲಾವಿದರು ಆಡಿತೋರಿಸಲಿದ್ದಾರೆ.
ಯಕ್ಷಗಾನದ ಹಿಮ್ಮೇಳದಲ್ಲಿ ಭಾಗವತರಾಗಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಮದ್ದಳೆಯಲ್ಲಿ ಸುನೀಲ ಭಂಡಾರಿ, ಚಂಡೆಯಲ್ಲಿ ಸುಜನ್ ಹಾಲಾಡಿ ಸಾಥ್ ನೀಡಲಿದ್ದಾರೆ. ಮುಮ್ಮೇಳದಲ್ಲಿ ಪ್ರಸನ್ನ ಶೆಟ್ಟಿಗಾರ್, ಕಾರ್ತಿಕ್ ಚಿಟ್ಟಾಣಿ, ಸುಧೀರ್ ಉದ್ದೂರ್, ರವೀಂದ್ರ ದೇವಾಡಿಗ, ವಿನಯ ಬೇರೊಳ್ಳಿ, ಸಂತೋಷ್ ಕುಲಾಲ್ ಹಾಗೂ ಸ್ಥಳೀಯ ಕಲಾವಿದರು ಭಾಗವಹಿಸಲಿದ್ದಾರೆ. ಎರಡೂ ಯಕ್ಷಗಾನ ಕಾರ್ಯಕ್ರಮಗಳು ಉಚಿತ ಪ್ರವೇಶ ಹಾಗೂ ಉಚಿತ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿದೆ ಎಂದು ವಿನಾಯಕ ಹೆಗಡೆ, ಪ್ರಶಾಂತ್ ಭಟ್ ಮತ್ತು ಗಣಪತಿ ಭಟ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.