ಯಲ್ಲಾಪುರ: ಶಾಲೆಗೆ ಪಡೆದ ಅಕ್ರಮ ವಿದ್ಯುತ್ ಸಂಪರ್ಕದಿoದ ಹಳಿಯಾಳದಲ್ಲಿ ಬಾಲಕಿ ಸಾವನಪ್ಪಿದ ಬೆನ್ನಲ್ಲೆ ವಿವಿಧ ಶಾಲೆಗಳಲ್ಲಿ ಈ ಹಿಂದೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದ ವಿಷಯ ಮುನ್ನಲೆಗೆ ಬಂದಿದೆ.
ಯಲ್ಲಾಪುರ ತಾಲೂಕಿನ ಪಾಣೆಗುಂಡಿ ಹಾಗೂ ಹುಣಸೆಗಿರಿ ಶಾಲೆಯಲ್ಲಿ ಸಹ ಅಕ್ರಮ ವಿದ್ಯುತ್ ಸಂಪರ್ಕ ಮಾಹಿತಿ ಹಿನ್ನಲೆ ಹೆಸ್ಕಾಂ ಅಧಿಕಾರಿಗಳು ಸಂಪರ್ಕ ಕಡಿತಗೊಳಿಸಿದ್ದಾರೆ. ಆದರೆ, `ಇಲ್ಲಿ ಮೊದಲಿನಿಂದಲೂ ವಿದ್ಯುತ್ ಸಂಪರ್ಕವೇ ಇರಲಿಲ್ಲ’ ಎಂದು ಶಿಕ್ಷಣ ಅಧಿಕಾರಿಗಳು ಹೇಳುತ್ತಿದ್ದಾರೆ. `ಹಿಂದಿನಿoದ ವಿದ್ಯುತ್ ಮೀಟರ್ ಮಾತ್ರ ಇದ್ದು, ಅದಕ್ಕೆ ಸಂಪರ್ಕ ಇರಲಿಲ್ಲ’ ಎಂಬುದು ಶಿಕ್ಷಣ ಇಲಾಖೆಯವರ ವಾದ. ಅನಧಿಕೃತ ವಿದ್ಯುತ್ ಪಡೆದ ಕಾರಣ ಸಂಪರ್ಕ ಕಡಿತಗೊಳಿಸಲಾಗಿದೆ’ ಎಂಬುದು ಹೆಸ್ಕಾಂ ಅಧಿಕಾರಿಗಳ ಮಾಹಿತಿ. ವಿದ್ಯುತ್ ಸಂಪರ್ಕವೇ ಇಲ್ಲ ಎಂದಾದರೆ ವಿದ್ಯುತ್ ಮೀಟರ್ ಅಗತ್ಯವೇನು? ಸoಪರ್ಕ ಇಲ್ಲದ ಕಡೆ ವಿದ್ಯುತ್ ಕಂಬ ಏರಿ ಹೆಸ್ಕಾಂ ಸಿಬ್ಬಂದಿ ಸರ್ವಿಸ್ ಲೈನ್ ತುಂಡರಿಸಿದ್ದಾದರೂ ಏತಕೆ? ಎಂಬುದು ಹೊಸ ಪ್ರಶ್ನೆ!
ಪಾಣೆಗುಂಡಿ ಶಾಲೆಯಲ್ಲಿನ ಅಕ್ರಮ ವಿದ್ಯುತ್ ಸಂಪರ್ಕದ ಬಗ್ಗೆ ಅಲ್ಲಿನ ಮುಖ್ಯ ಶಿಕ್ಷಕ ಮಹೇಶ ಮಡಿವಾಳ `ಅಕ್ರಮ ವಿದ್ಯುತ್ ಸಂಪರ್ಕ ಪಡೆದಿಲ್ಲ’ ಎಂದು ವಾದಿಸಿದ್ದರು. `ವಿದ್ಯುತ್ ಸಂಪರ್ಕ ಇಲ್ಲದೇ ಬಿಸಿಯೂಟದ ಅಡುಗೆ ಹೇಗೆ ತಯಾರಿಸುತ್ತೀರಿ?’ ಎಂದು ಪ್ರಶ್ನಿಸಿದಾಗ ಮನೆಯಿಂದಲೇ ಸಿದ್ದಪಡಿಸಿಕೊಂಡು ಊಟ ಬಡಿಸುವುದಾಗಿಯೂ ಸಮರ್ಥಿಸಿಕೊಂಡಿದ್ದಾರೆ. `ಶಿಕ್ಷಕರ ಸಮ್ಮುಖದಲ್ಲಿ ಅಡುಗೆ ಮಾಡಬೇಕು. ಮಕ್ಕಳಿಗೆ ಬಡಿಸುವ ಮುನ್ನ ಅದನ್ನು ಶಿಕ್ಷಕರು ಸೇವಿಸಬೇಕು’ ಎಂಬ ಸುತ್ತೋಲೆಯಿರುವ ಕಾರಣ ಮನೆಯಿಂದ ಅಡುಗೆ ಮಾಡಿಕೊಂಡು ಬರಲು ಅವಕಾಶವಿಲ್ಲ.
ಅನಧಿಕೃತ ವಿದ್ಯುತ್ ಸಂಪರ್ಕ ಪಡೆದಿದ್ದ ಹುಣಸಗೇರಿ ಶಾಲೆಯವರು ಆದ ಪ್ರಮಾದವನ್ನು ಸರಿಪಡಿಸಿಕೊಂಡು ಹೋಗುವ ಮಾತನಾಡಿದ್ದಾರೆ. `ಅನಧಿಕೃತ ವಿದ್ಯುತ್ ಸಂಪರ್ಕದ ಬಗ್ಗೆ ಮಾಹಿತಿ ಇರಲಿಲ್ಲ. ವಿದ್ಯುತ್ ಸಂಪರ್ಕವೂ ಇರಲಿಲ್ಲ. ಹೆಸ್ಕಾಂ ತಿಳುವಳಿಕೆ ನೀಡಿದ ನಂತರ ಆ ಬಗ್ಗೆ ಅರಿವಿಗೆ ಬಂದಿದೆ. ಹೊಸ ಮೀಟರ್ ಪಡೆದು ಶಾಲೆ ಮುನ್ನಡೆಸುತ್ತೇವೆ’ ಎಂದು ಹೇಳಿದರು.
ಇನ್ನೂ ಹೆಸ್ಕಾಂ ಅಧಿಕಾರಿಗಳು ಇನ್ನಷ್ಟು ಶೋಧ ನಡೆಸುತ್ತಿದ್ದು ಅನಧಿಕೃತ ವಿದ್ಯುತ್ ಸಂಪರ್ಕ ಪಡೆದವರ ಹುಡುಕಾಟ ನಡೆಸಿದ್ದಾರೆ. ಸಿಕ್ಕಿಬಿದ್ದವರಿಗೆ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಠೇವಣಿ ಪಾವತಿಸುವುದರ ಜೊತೆ ಅನುಮತಿ ಪಡೆದು ಶಾಲೆಗೆ ವಿದ್ಯುತ್ ಸಂಪರ್ಕ ಪಡೆಯುವಂತೆಯೂ ಸೂಚನೆ ನೀಡಿದ್ದಾರೆ. ಈ ಹಿನ್ನಲೆ ಅನಧಿಕೃತ ವಿದ್ಯುತ್ ಸಂಪರ್ಕ ಪಡೆದ ಶಾಲೆಯವರು ಕಚೇರಿಯಿಂದ ಕಚೇರಿಗೆ ಓಡಾಟ ನಡೆಸುತ್ತಿದ್ದಾರೆ.
`ಅಕ್ರಮ ವಿದ್ಯುತ್ ಸಂಪರ್ಕ ಹೊಂದಿದ ಶಾಲೆಗಳ ಬಗ್ಗೆ ಮಾಹಿತಿ ಕೊಡುವಂತೆ ಜಿಲ್ಲಾ ಪಂಚಾಯತ ಸೂಚನೆ ನೀಡಿದೆ. ಈ ಬಗ್ಗೆ ಎಲ್ಲಾ ಶಿಕ್ಷಕರಿಗೂ ತಿಳಿಸಿದ್ದು, ಅಧಿಕೃತ ವಿದ್ಯುತ್ ಸಂಪರ್ಕ ಪಡೆಯುವಂತೆ ಸೂಚಿಸಲಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ ತಿಳಿಸಿದರು. `ಅನಧಿಕೃತ ವಿದ್ಯುತ್ ಸಂಪರ್ಕ ಪಡೆದ ಮನೆ, ಶಾಲೆಗಳನ್ನು ಗುರುತಿಸಿ ಸಂಪರ್ಕ ಕಡಿತ ಮಾಡುವಂತೆ ಹೆಸ್ಕಾಂ ಸಿಬ್ಬಂದಿಗೆ ಸೂಚಿಸಲಾಗಿದೆ. ವಿದ್ಯುತ್ ಕಳ್ಳತನ ಅಪಾಯ ಹಾಗೂ ಕಾನೂನುಬಾಹಿರ ಎನ್ನುವ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ’ ಎಂದು ಹೆಸ್ಕಾಂ ಕಾರ್ಯನಿರ್ವಾಹ ಅಭಿಯಂತರ ರಮಾಕಾಂತ ನಾಯ್ಕ ಮಾಹಿತಿ ನೀಡಿದರು.
ವಿದ್ಯುತ್ ಕಳ್ಳತನ ಶಿಕ್ಷಾರ್ಹ ಅಪರಾಧ. ವಿದ್ಯುತ್ ಕಳ್ಳತನದ ಬಗ್ಗೆ 1912ಗೆ ದೂರು ಕೊಡಿ