ಉತ್ತರ ಕನ್ನಡ ಜಿಲ್ಲೆಯ ಹಲವು ಕಡೆ ರಾಜಾರೋಷವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಕಡಿಮೆ ಸಂಬಳಕ್ಕೆ ಸಿಗುವ ಬಿಹಾರಿ ಕಾರ್ಮಿಕರನ್ನು ಬಳಸಿಕೊಂಡು ಮರಳುಗಾರಿಕೆ ನಡೆಯುತ್ತಿದ್ದು, ನೆರೆ ರಾಜ್ಯಗಳಿಗೆ ದುಬಾರಿ ಬೆಲೆಗೆ ಮರಳು ಮಾರಾಟ ನಡೆದಿದೆ.
ಈ ಬಗೆಯ ಅಕ್ರಮ ಮರಳುಗಾರಿಕೆ ಪರಿಣಾಮ ಸ್ಥಳೀಯ ಕಟ್ಟಡಗಳ ನಿರ್ಮಾಣಕ್ಕೆ ಮರಳು ಸಿಗುತ್ತಿಲ್ಲ. ಕೃತಕವಾಗಿ ಮರಳು ಅಭಾವ ಸೃಷ್ಠಿಯಾದ ಕಾರಣ ದುಬಾರಿ ಬೆಲೆ ನೀಡಿ ಸ್ಥಳೀಯರು ಮರಳು ಖರೀದಿಸುತ್ತಿದ್ದಾರೆ. ಪರಸರ ನಾಶ, ನ್ಯಾಯಾಲಯದ ಸೂಚನೆ ಮೀರಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೂ ಅಧಿಕಾರಿಗಳು ಮೌನವಾಗಿರುವುದು ಅನುಮಾನಗಳಿಗೆ ಕಾರಣವಾಗಿದೆ.
ಹೊನ್ನಾವರದ ಶರಾವತಿ ಹಾಗೂ ಕಾರವಾರದ ಕಾಳಿ ನದಿ ಪ್ರದೇಶದಲ್ಲಿ ವ್ಯಾಪಕ ಪ್ರಮಾಣದಲ್ಲಿ ಮರಳುಗಾರಿಕೆ ನಡೆಯುತ್ತಿದೆ. ಬಡವರ ಮನೆಗೆ ಅನುಕೂಲ ಮಾಡಿಕೊಡಲು ಮರಳು ತೆಗೆಯುತ್ತಿರುವುದಾಗಿ ದಂಧೆಕೋರರು ಹೇಳಿಕೊಂಡು, ತಾವು ಕಾಸು ಮಾಡುತ್ತಿದ್ದಾರೆ. ಜೊತೆಗೆ `ಪೊಲೀಸರಿಗೆ ಅಷ್ಟು ಕೊಡಬೇಕು.. ತಹಶೀಲ್ದಾರರಿಗೆ ಇಷ್ಟು ಕೊಡಬೇಕು’ ಎಂದು ಬಹಿರಂಗವಾಗಿ ಹೇಳಿಕೊಂಡು ಜನರಿಂದ ಆ ಹಣ ವಸೂಲಿ ಮಾಡುತ್ತಿದ್ದಾರೆ. `ಗಣಿ ಇಲಾಖೆಯವರು ಮಾತ್ರ ಹಣ ಪಡೆಯುತ್ತಿಲ್ಲ. ಬದಲಾಗಿ ಸಿಕ್ಕಿಬಿದ್ದರೆ ಭಾರೀ ಪ್ರಮಾಣದ ದಂಡ ವಿಧಿಸುತ್ತಾರೆ’ ಎಂಬುದು ಸಹ ಅಕ್ರಮ ಮರಳುಗಾರಿಕೆ ನಡೆಸುತ್ತಿರುವವರಿಂದ ಬರುವ ಮಾತು.
ಅಕ್ರಮ ಮರಳುಗಾರಿಕೆ ತಡೆಯಲು ತೆರಳಿದ ಗಣಿ ಇಲಾಖೆ ಅಧಿಕಾರಿಗಳಿಗೆ ಮುತ್ತಿಗೆ ಹಾಕಿ ಹಲ್ಲೆಗೆ ಯತ್ನಿಸಿದ ನಿದರ್ಶನಗಳು ಜಿಲ್ಲೆಯಲ್ಲಿವೆ. ದೂರು ನೀಡಿದವರ ಮನೆ ಮೇಲೆಯೂ ಮರಳು ಮಾಫಿಯಾದವರು ದಾಳಿ ನಡೆಸಿದ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ. ಹೀಗಾಗಿ `ಊರ ಉಸಾಬರಿ ನಮಗೇತಕೆ?’ ಎಂದು ಅನೇಕರು ಮೌನವಾಗಿದ್ದಾರೆ. ಸದ್ಯ ಪರಿಸರ ನಾಶ, ನ್ಯಾಯಾಲಯದ ತಡೆಯನ್ನು ಮೀರಿ ಮರಳುಗಾರಿಕೆ ನಡೆಯುತ್ತಿದ್ದರೂ ಅದನ್ನು ತಡೆಯುವ ತಾಕತ್ತು ಯಾರಿಗೂ ಇಲ್ಲ.
ಇನ್ನೂ ಅಕ್ರಮ ಮರಳು ಸಾಗಾಟ ಮಾಡುವ ಲಾರಿಗಳು ಮಿತಿಗಿಂತಲೂ ಅಧಿಕ ಬಾರದೊಂದಿಗೆ ಸಂಚರಿಸುತ್ತಿದೆ. ಇದರಿಂದ ಅವಧಿಗೂ ಮುನ್ನ ರಸ್ತೆ ಹಾಳಾಗುತ್ತಿದೆ. ಮರಳು ಲಾರಿಗಳ ಅಟ್ಟಹಾಸದಿಂದ ಅಪಘಾತಗಳ ಸಂಖ್ಯೆಯೂ ಹೆಚ್ಚಾಗಿದೆ. ಕಳೆದ ವರ್ಷ ಮಾವಿನಕುರ್ವಾದಲ್ಲಿ ಮರಳು ಸಾಗಾಣಿಕೆ ವಾಹನ ಬಡಿದು ವಿದ್ಯಾರ್ಥಿಯೊಬ್ಬ ಸಾವನಪ್ಪಿದ್ದು, ಆ ಪ್ರಕರಣ ನಂತರ ಮತ್ತೆ ಮುನ್ನಲೆಗೆ ಬಂದಿಲ್ಲ. ಹೊನ್ನಾವರ ತಾಲೂಕಿನ ಮಾವಿನಕುರ್ವಾ, ಬಳಕೂರು, ಹೆರಂಗಡಿ, ಮೂಡ್ಕಣಿ, ಕೊಡಾಣಿ, ಹೊಸಾಡು, ಪಡುಕುಳಿ ಸೇರಿ ಹಲವು ಕಡೆ ಅಕ್ರಮ ಮರಳುಗಾರಿಕೆಯಿಂದ ಜನ ಸಮಸ್ಯೆಗೆ ಸಿಲುಕಿದ್ದಾರೆ.
ಅಲ್ಲಲ್ಲಿ ಆಗಾಗ ದಾಳಿ!
ಉತ್ತರ ಕನ್ನಡ ಜಿಲ್ಲೆಯಲ್ಲಿ ನಿತ್ಯ ನೂರಾರು ಮರಳು ಲಾರಿಗಳು ಸಂಚರಿಸುತ್ತದೆ. ಪ್ರತಿ ಪಟ್ಟಣದಲ್ಲಿಯೂ ಸರ್ಕಾರದಿಂದಲೇ ಅಳವಡಿಸಲಾದ ಸಿಸಿ ಕ್ಯಾಮರಾದಲ್ಲಿ ಈ ಲಾರಿಗಳ ಸಂಚಾರ ಸೆರೆಯಾಗುತ್ತಿದೆ. ಆದರೆ, ಮರಳು ವಾಹನಗಳ ಮೇಲೆ ನಡೆಯುವ ದಾಳಿ ತೀರಾ ಅಪರೂಪ.

ಸದ್ಯ ಅಂಕೋಲಾ ತಾಲೂಕಿನ ಕೋಡ್ಸಣಿಯಲ್ಲಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಲಾರಿ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ಮಟ್ಟದಲ್ಲಿ ಈ ದಾಳಿ ನಡೆದಿದ್ದು, ನಿತ್ಯ ಈ ಭಾಗದಲ್ಲಿ ಕರ್ತವ್ಯ ನಿಭಾಯಿಸುವವರು ಅಕ್ರಮ ಕಂಡರೂ ಕಾಣದಂತೆ ಸುಮ್ಮನಿರುವ ಆರೋಪ ಕೇಳಿಬಂದಿದೆ.
ಇನ್ನೂ ತಿಂಗಳ ಹಿಂದೆ ಹೊನ್ನಾವರದಿಂದ ಹಳಿಯಾಳಕ್ಕೆ ಅಕ್ರಮ ಮರಳು ಸರಬರಾಜು ಆಗುತ್ತಿರುವುದನ್ನು ಆ ಭಾಗದ ತಹಶೀಲ್ದಾರ್ ತಡೆದಿದ್ದರು. ಹೊನ್ನಾವರದಿಂದ ಹಳಿಯಾಳದವರೆಗೆ ಅಂಕೋಲಾ-ಯಲ್ಲಾಪುರ ಮಾರ್ಗವಾಗಿ ಅಕ್ರಮ ಮರಳು ಸಾಗಾಟ ನಡೆದರೂ ಈ ಭಾಗದ ಅಧಿಕಾರಿಗಳು ಅದನ್ನು ತಡೆಯದ ಬಗ್ಗೆಯೂ ಅನುಮಾನಗಳು ವ್ಯಕ್ತವಾಗಿದ್ದವು.