ಪುಟ್ಟ ಭೂಮಿಯಲ್ಲಿ ಕೃಷಿ ಕಾಯಕದ ಜೊತೆ ಹೈನುಗಾರಿಕೆ ನಡೆಸಿ ಬದುಕು ಕಟ್ಟಿಕೊಂಡಿದ್ದ ದೀಪಾ ಕುಣಬಿ ಅವರಿಗೆ ಕಾಡಿನ ದುಷ್ಟವ್ಯಾಘ್ರ ಆಘಾತವನ್ನುಂಟು ಮಾಡಿದೆ. ಮೇವಿಗೆ ತೆರಳುವುದಕ್ಕಾಗಿ ಕೊಟ್ಟಿಗೆಯಿಂದ ಹೊರಟಿದ್ದ ಗರ್ಭಿಣಿ ಹಸುವಿಗೆ ಹೊಂಚು ಹಾಕಿದ್ದ ಚಿರತೆ ಹಸುವಿನ ಹೊಟ್ಟೆಯೊಳಗಿದ್ದ ಕರುವನ್ನು ಅರೆಬರೆಯಾಗಿ ಭಕ್ಷಿಸಿದೆ!
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಂಪ್ಲಿ ಬಳಿಯ ಕೆರೆಹೊಸಳ್ಳಿ ಮಂಡಿಗೆಜಡ್ಡಿಯಲ್ಲಿ ದೀಪಾ ನಾರಾಯಣ ಕುಣಬಿ ಹೈನುಗಾರಿಕೆ ನಡೆಸುತ್ತಿದ್ದಾರೆ. ದೀಪಾ ಕುಣಬಿ ಅವರ ವಾಸಕ್ಕೆ ಯೋಗ್ಯ ಮನೆಯೂ ಇಲ್ಲ. ಆ ಪ್ರಮಾಣದ ಬಡತನದ ನಡುವೆಯೂ ಅವರು ಪುಟ್ಟದೊಂದು ಜೋಪಡಿ ನಿರ್ಮಿಸಿ ಅಲ್ಲಿ 15 ಜಾನುವಾರುಗಳನ್ನು ಸಾಕಿದ್ದಾರೆ. ಎಲ್ಲಾ ಹಸುಗಳನ್ನು ಅತ್ಯಂತ ಅಕ್ಕರೆಯಿಂದ ಬೆಳೆಸಿದ್ದಾರೆ.
ದೀಪಾ ಕುಣಬಿ ನಿತ್ಯವೂ ಜಾನುವಾರುಗಳ ಹಾಲು ಹಿಂಡಿ ಅದನ್ನು ಮನೆ ಬಳಕೆಗೆ ಉಪಯೋಗಿಸುತ್ತಿದ್ದರು. ಉಳಿದ ಹಾಲನ್ನು ಉಪಯೋಗಿಸಿ ತುಪ್ಪ ಮಾಡಿ ಮಾರಾಟ ಮಾಡುತ್ತಿದ್ದರು. ಇದರೊಂದಿಗೆ ಹಸುವಿನ ಗೊಬ್ಬರ ಮಾರಾಟದ ಮೂಲಕವೂ ಅವರು ಆರ್ಥಿಕವಾಗಿ ಸಬಲರಾಗುವ ಪ್ರಯತ್ನ ನಡೆಸಿದ್ದರು. ತಮ್ಮ ಕುಟುಂಬದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕಾಮದೇನುವಿನ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು.
ವಾರದ ಹಿಂದೆ ಊರಿನಲ್ಲಿ ಚಿರತೆ ಓಡಾಟದ ಸುದ್ದಿ ಕೇಳಿದ ದೀಪಾ ಕುಣಬಿ ಕೊಟ್ಟಿಗೆಗೆ ಭದ್ರತೆ ಒದಗಿಸುವ ತಯಾರಿ ನಡೆಸಿದ್ದರು. ಜೋಪಡಿ ಗಾತ್ರದ ಕೊಟ್ಟಿಗೆಯ ಒಳಗೆ ವನ್ಯಜೀವಿ ಹಾವಳಿ ನಡೆಯದಂತೆ ಮುನ್ನಚ್ಚರಿಕೆವಹಿಸಿದ್ದರು. ಅದಾಗಿಯೂ ಮಂಗಳವಾರ ಬೆಳಗ್ಗೆ ಮೇವಿಗೆ ತೆರಳುತ್ತಿದ್ದ ಜಾನುವಾರು ಕೊಟ್ಟಿಗೆಯಿಂದ ಹೊರಬಿದ್ದ ತಕ್ಷಣ ಚಿರತೆಯ ಆಕ್ರಮಣ ನಡೆದಿದೆ. ಪುಣ್ಯಕೋಟಿಯ ಹೊಟ್ಟೆ ಕೊರೆದು ಒಳಗಿದ್ದ ಶಿಶುವನ್ನು ಅರೆಬರೆಯಾಗಿ ಭಕ್ಷಿಸಿದೆ. ಇದರೊಂದಿಗೆ ಹಸುವಿನ ಕುತ್ತಿಗೆಯ ಭಾಗವನ್ನು ಸಹ ಅರ್ದ ತುಂಡರಿಸಿದೆ.
ಜಾನುವಾರು ಮೇಲಿನ ದಾಳಿಯನ್ನು ಕಣ್ಣಾರೆ ನೋಡಿದರೂ ಚಿರತೆಯನ್ನು ಓಡಿಸಲು ಸಾಧ್ಯವಾಗಲಿಲ್ಲ. ದೀಪಾ ಅವರ ಕುಟುಂಬದವರ ಮುಂದೆಯೇ ಹಸು ಕೊನೆಉಸಿರೆಳೆಯಿತು. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಇಲಾಖೆ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆಯೂ ಬಡ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. `ಗರ್ಭಿಣಿ ಹಸು ಸಾವನಪ್ಪಿದ ಕಾರಣ ಸಂತ್ರಸ್ತ ಕುಟುಂಬಕ್ಕೆ 20 ಸಾವಿರ ರೂವರೆಗೆ ಪರಿಹಾರ ಸಿಗುವ ಸಾಧ್ಯತೆಯಿದೆ’ ಎಂದು ವಲಯ ಅರಣ್ಯಾಧಿಕಾರಿ ಬಸವರಾಜ ಬಚ್ಚೋಳ್ಳಿ ಮಾಹಿತಿ ನೀಡಿದರು.