ಅರಣ್ಯವಾಸಿಗಳ ಪರ ನಿಲುವು ಪ್ರಕಟಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಏಪ್ರಿಲ್ 2ರಂದು ಉತ್ತಮ ಅವಕಾಶ ಸಿಕ್ಕಿದ್ದು, ಆ ದಿನದೊಳಗೆ ಸರ್ಕಾರ ಸುಪ್ರೀಂ ಕೋರ್ಟಿಗೆ ಅಪಡಾವಿಟ್ ಸಲ್ಲಿಸದೇ ಇದ್ದರೆ ದೇಶದಲ್ಲಿನ 18 ಲಕ್ಷಕ್ಕೂ ಅಧಿಕ ಅತಿಕ್ರಮಣದಾರರು ಅತಂತ್ರರಾಗುವ ಆತಂಕ ಎದುರಾಗಿದೆ.
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಭೂಮಿ ಹಕ್ಕಿಗೆ ಸಂಬoಧಿಸಿ ಕೇಂದ್ರ, ರಾಜ್ಯ ಸರಕಾರ ಅರಣ್ಯವಾಸಿಗಳ ಪರ ಬದಲಿ ಪರಿಹಾರ ಸೂತ್ರವನ್ನು ಹೆಚ್ಚುವರಿ ಅಫಿಡಾವಿಟ್ ಮೂಲಕ ಸುಪ್ರೀಂ ಕೋರ್ಟಗೆ ಸಲ್ಲಿಸಬೇಕಿದೆ. ಈ ವಿಷಯದಲ್ಲಿ ನಿರ್ಲಕ್ಷ ಅನುಸರಿಸಿದರೆ ಅರಣ್ಯ ಅತಿಕ್ರಮಣದಾರರ ಹಕ್ಕಿಗೆ ಹಿನ್ನಡೆ ಆಗುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಕಳವಳ ವ್ಯಕ್ತಪಡಿಸಿದ್ದಾರೆ.
`ಪರಿಸರವಾದಿ ಏಂಟು ಸಂಘಟನೆಗಳು ಸುಪ್ರೀಂ ಕೋರ್ಟನಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ತಿರಸ್ಕಾರವಾದ ಅರಣ್ಯವಾಸಿಗಳನ್ನು ಅರಣ್ಯ ಭೂಮಿಯಿಂದ ಒಕ್ಕಲೆಬ್ಬಿಸಬೇಕು ಎಂದು ಅರ್ಜಿ ಸಲ್ಲಿಸಿವೆ. ಅತಿಕ್ರಮಿಸಿರುವ ಕ್ಷೇತ್ರದಲ್ಲಿ ಅರಣ್ಯೀಕರಣ ಮಾಡಬೇಕು ಎಂದು 2009ರಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ತಿರಸ್ಕಾರವಾಗಿರುವ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವುದಾಗಿ ರಾಜ್ಯ ಸಕಾರಗಳು ವಾಗ್ದಾನ ಮಾಡಿದೆ. ಈ ಹಿನ್ನಲೆಯಲ್ಲಿ ಪ್ರಕರಣ ಮುಂದಿನ ವಿಚಾರಣೆ ಏಪ್ರಿಲ್ 2ರಂದು ಸುಪ್ರೀಂ ಕೋರ್ಟಿನಲ್ಲಿ ನಡೆಯಲಿರುವುದರಿಂದ ಅರಣ್ಯವಾಸಿಗಳ ಪರ ಹೆಚ್ಚುವರಿ ಅಫಿಡಾವಿಟ್ ಸಲ್ಲಿಕೆ ಸೂಕ್ತ’ ಎಂದವರು ವಿವರಿಸಿದ್ದಾರೆ.
`ಅರಣ್ಯವಾಸಿಗಳ ಅರ್ಜಿಗಳನ್ನ ಕಾನೂನಿಗೆ ವ್ಯತಿರಿಕ್ತವಾಗಿ ಹಾಗೂ ಕಾನೂನು ವಿಧಿವಿಧಾನ ಅನುಸರಿಸದ ಕಾರಣ ತಿರಸ್ಕೃತವಾಗಿದೆ. ದೇಶದ 21 ರಾಜ್ಯಗಳಲ್ಲಿನ 1801805 ಅರಣ್ಯವಾಸಿಗಳ ಅರ್ಜಿ ತಿರಸ್ಕೃತವಾದ ಬಗ್ಗೆ ಕೇಂದ್ರ ಬುಡಕಟ್ಟು ಮಂತ್ರಾಲಯ ಮಾಹಿತಿ ನೀಡಿದೆ. ಕರ್ನಾಟಕದಲ್ಲಿ 2,47,709 ಅರಣ್ಯವಾಸಿಗಳ ಅರ್ಜಿ ತಿರಸ್ಕಾರವಾಗಿದೆ’ ಎಂದು ಸಂಘಟನೆ ಜಿಲ್ಲಾ ಸಂಚಾಲಕ ಇಬ್ರಾಹಿ ಗೌಡಳ್ಳಿ, ಚಂದ್ರಶೇಖರ ಶಾನಭಾಗ ಬಂಡಲ, ಸ್ವಾತಿ ಜೈನ್ ಬಂಕನಾಳ, ನಾಗರಾಜ ದೇವಸ್ಥಳಿ, ಗಂಗೂಬಾಯಿ ರಜಪೂತ, ಸಾವಿತ್ರಿ ರಜಪೂತ, ಕಲ್ಪನಾ ಪಾವಸ್ಕರ, ಯಶೋಧಾ ನೌಟುರು, ಅಬ್ದುಲ ಸತ್ತಾರ್ ಗುಲಾಬ ಸಾಬ, ನಾರಾಯಣ ಮಂಜು ನಾಯ್ಕ ಅವರ ಮುಂದೆ ರವೀಂದ್ರ ನಾಯ್ಕ ವಿವರಿಸಿದರು.