ಭತ್ತ ಬೆಳೆದು ದಾಸ್ತಾನು ಮಾಡಿದ್ದ ಪ್ರದೇಶಕ್ಕೆ ಆಕಸ್ಮಿಕ ಬೆಂಕಿ ತಗುಲಿದೆ. ಪರಿಣಾಮ ಭತ್ತದ ಜೊತೆ ಹುಲ್ಲು ಸಹ ಹೊತ್ತಿ ಉರಿದಿದೆ.
ಯಲ್ಲಾಪುರ ತಾಲೂಕಿನ ಬೆಡ್ಸಗದ್ದೆಯ ಲಕ್ಷ್ಮಣ ಗರಪ್ಪಿ ಅವರು ಎಷ್ಟೇ ಕಷ್ಟವಾದರೂ ಭತ್ತದ ಬೆಳೆ ಬಿಟ್ಟಿರಲಿಲ್ಲ. ಸ್ವತಃ ದುಡಿಯುವುದರೊಂದಿಗೆ ಕೂಲಿ ಆಳುಗಳನ್ನುಪಡೆದು ಅವರು ಈ ಬಾರಿಯೂ ಭತ್ತ ಬೆಳೆದಿದ್ದರು. ಫಸಲು ಕೊಯ್ಲು ಮುಗಿದ ನಂತರ ಹುಲ್ಲು ಹಾಗೂ ಭತ್ತವನ್ನು ಗದ್ದೆ ಬಳಿ ದಾಸ್ತಾನು ಮಾಡಿದ್ದರು.
ಭಾನುವಾರ ಲಕ್ಷ್ಮಣ ಗರಪ್ಪಿ ಅವರು ಕೆಲಗಾರರನ್ನು ನೇಮಿಸಿ ಭತ್ತವನ್ನು ಒಕ್ಕುವ ಕೆಲಸಕ್ಕೆ ಅಣಿಯಾಗಿದ್ದರು. ರಾತ್ರಿ 10 ಗಂಟೆ ಸುಮಾರಿಗೆ ಊಟ ಮುಗಿಸಿ ಬರುವಷ್ಟರಲ್ಲಿ ಭತ್ತದ ಬಣವೆಗೆ ಬೆಂಕಿ ತಗುಲಿತ್ತು. ಕ್ಷಣಮಾತ್ರದಲ್ಲಿಯೇ 30 ಚೀಲ ಭತ್ತ ಹಾಗೂ 200ಕ್ಕೂ ಅಧಿಕ ಹುಲ್ಲಿನ ಕಟ್ಟು ಬೆಂಕಿಗೆ ಆಹುತಿಯಾಯಿತು.
ವಿಷಯ ಅರಿತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರೂ ಬೂದಿ ಬಿಟ್ಟು ಬೇರೆನೂ ಸಿಗಲಿಲ್ಲ. ಹೆಚ್ಚಿನ ಅನಾಹುತ ಆಗದಂತೆ ಅಗ್ನಿಶಾಮಕ ಸಿಬ್ಬಂದಿ ತಡೆದರು. ಭತ್ತದ ಗೊಣವೆ ಪಕ್ಕ ವಿದ್ಯುತ್ ಲೈನ್ ಹಾದು ಹೋಗಿರುವುದರಿಂದ ಶಾರ್ಟ ಸರ್ಕೀಟ್’ನಿಂದ ಅನಾಹುತ ನಡೆದ ಬಗ್ಗೆ ಅಂದಾಜಿಸಲಾಗಿತ್ತು. ಆದರೆ, ಮುಂಜಾನೆ ಪರಿಶೀಲಿಸಿದಾಗ ಶಾರ್ಟ ಸರ್ಕೀಟ್’ನ ಯಾವುದೇ ಲಕ್ಷಣಗಳು ಕಾಣಿಸಲಿಲ್ಲ.
ಲಕ್ಷ್ಮಣ ಗರಪ್ಪಿ ಅವರು ಪ್ರಗತಿಪರ ಕೃಷಿಕರಾಗಿದ್ದು, ಮನೆಗೆ ಅಗತ್ಯವಿರುವಷ್ಟು ಭತ್ತ ಬೆಳೆದಿದ್ದರು. ಇದನ್ನು ಸಹಿಸದ ಕಿಡಿಗೇಡಿಗಳು ಅವರ ಮೇಲಿನ ಹೊಟ್ಟೆಕಿಚ್ಚಿನಿಂದ ಭತ್ತದ ಬಣವೆಗೆ ಬೆಂಕಿ ತಗುಲಿಸಿದ ಅನುಮಾನಗಳಿವೆ. ವರ್ಷವೀಡಿ ಅನ್ನ ನೀಡಬೇಕಿದ್ದ ಭತ್ತ ಬೆಂಕಿಗೆ ಆಹುತಿಯಾಗಿದ್ದರಿಂದ ಲಕ್ಷ್ಮಣ ಗರಪ್ಪಿ ಅವರಿಗೆ 75 ಸಾವಿರಕ್ಕೂ ಅಧಿಕ ಹಣ ನಷ್ಟವಾಗಿದೆ.