ಬಂಗಾರದ ಆಭರಣಗಳನ್ನು ತಯಾರಿಸುವ ರೋಹಿತ ಕೋಲ್ವೆಕರ್ ಅವರಿಗೆ ಅವರ ಬಳಿ ಕೆಲಸಕ್ಕಿದ್ದ ರಂಜನ್ ಮೈತಿ ಮೋಸ ಮಾಡಿದ್ದಾರೆ.
ಕಾರವಾರದ ಸುಂಕೇರಿ ಕಠಿಣಕೋಣ ಮೂರು ದೇವಸ್ಥಾನದ ಹತ್ತಿರ ರೋಹಿತ ಕೋಲ್ವೆಕರ್ ಅವರು ವಾಸಿಸುತ್ತಾರೆ. ಅವರು ತಮ್ಮ ಮನೆಯಲ್ಲಿಯೇ `ಸಶ್ಮಿ ಜ್ಯುವೆಲರಿ’ ಎಂಬ ಉದ್ದಿಮೆ ನಡೆಸುತ್ತಿದ್ದು, ಅದರ ಮೂಲಕ ಬಂಗಾರದ ಆಭರಣಗಳನ್ನು ತಯಾರಿಸಿಕೊಡುತ್ತಾರೆ. ಇದಕ್ಕಾಗಿ ಅವರು ಪಶ್ಚಿಮ ಬಂಗಾಳದ ರಂಜನ್ ಮೈತಿ ಎಂಬಾತರನ್ನು ಸಹಾಯಕ್ಕಾಗಿ ನೇಮಿಸಿಕೊಂಡಿದ್ದರು.
ರoಜನ ಮೈತಿ 2024ರ ಜುಲೈ 20ರಿಂದ ಬಂಗಾರದ ಕೆಲಸಗಾರನಾಗಿ ಕೆಲಸ ಮಾಡಿಕೊಂಡಿದ್ದು, ನಂಬಿಕೆ ಬರುವಂತೆ ವರ್ತಿಸಿದ್ದರು. ರಂಜನ್ ಮೈತಿ ಅವರಿಗೆ ವೇತನದ ಜೊತೆ ಕೆಲಸದ ಆಧಾರದ ಮೇಲೆ ವಿಶೇಷ ಭತ್ಯೆಯನ್ನು ರೋಹಿತ ಕೊಲ್ವೇಕರ್ ನೀಡುತ್ತಿದ್ದರು. ಹೀಗಿದ್ದರೂ ರಂಜನ್ ಮೈತಿ ನೀಡಿದ ಬಂಗಾರವನ್ನು ಸರಿಯಾಗಿ ಮರಳಿಸದೇ ಮೋಸ ಮಾಡಿದ್ದಾರೆ.
ಆಭರಣ ತಯಾರಿಕೆಗಾಗಿ ರೋಹಿತ್ ಕೋಲ್ವೆಕರ್ 249 ಗ್ರಾಂ ಬಂಗಾರವನ್ನು ರಂಜನ್ ಮೈತಿಗೆ ನೀಡಿದ್ದರು. ಆದರೆ, ಸಮಯಕ್ಕೆ ಸರಿಯಾಗಿ ಆಭರಣ ತಯಾರಿಸಿ ಕೊಟ್ಟಿರಲಿಲ್ಲ. ಈ ಬಗ್ಗೆ ಸಾಕಷ್ಟು ವಿಚಾರಿಸಿದ ನಂತರ ನೀಡಿದ ಬಂಗಾರವನ್ನು ಮರಳಿ ಪಡೆಯಲು ರೋಹಿತ್ ತೆರಳಿದ್ದರು. ಆಗ ಅಲ್ಪ ಪ್ರಮಾಣದ ಬಂಗಾರವನ್ನು ಮಾತ್ರ ರಂಜನ್ ಕೊಟ್ಟು ಕಳುಹಿಸಿದ್ದರು.
ಮನೆಗೆ ಬಂದು ಪರಿಶೀಲಿಸಿದಾಗ ರಂಜನ್ ಮೈತಿ ನೀಡಿದ ಬಂಗಾರದಲ್ಲಿ ಮಿಶ್ರಣ ಕಂಡು ಬಂದಿತು. ಜೊತೆಗೆ ನೀಡಿದ ಪ್ರಮಾಣದ ಬಂಗಾರವೂ ಇರಲಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ವಿಚಾರಿಸಿದಾಗಲೂ `ನಾಳೆ ಕೊಡುವೆ’ ಎಂದು ರಂಜನ್ ಹೇಳುತ್ತಿದ್ದರು. ಕೊನೆಗೆ ಬಂಗಾರ ಮರಳಿಸದೇ ರಂಜನ್ ಮೈತಿ ಪಶ್ಚಿಮ ಬಂಗಾಳಕ್ಕೆ ಪರಾರಿಯಾಗಿದ್ದು, ಮೋಸ ಹೋಗಿರುವುದನ್ನು ಅರಿತ ರೋಹಿತ್ ಕೋಲ್ವೆಕರ್ ಪೊಲೀಸ್ ದೂರು ನೀಡಿದ್ದಾರೆ.