ಅತಿ ಹೆಚ್ಚು ವಿದ್ಯುತ್ ಬಳಸಿ ಕಡಿಮೆ ಪ್ರಮಾಣದ ವಿದ್ಯುತ್ ಉತ್ಪಾದನೆ ಮಾಡುವ ಉದ್ದೇಶಕ್ಕಾಗಿ ಸರ್ಕಾರ ಶರಾವತಿ ಜಲ ವಿದ್ಯುತ್ ಯೋಜನೆ ಜಾರಿಗೆ ಆಸಕ್ತಿವಹಿಸಿದೆ. ಶರಾವತಿ ಅಭಯಾರಣ್ಯದ ಪ್ರಾಣಿ ಪಕ್ಷಿ, ಸಸ್ಯ ಸಂಕುಲಕ್ಕೆ ಧ್ವನಿಯಾಗಬೇಕಿದ್ದ ವನ್ಯಜೀವಿ ಮಂಡಳಿಯೇ ಈ ಭಾಗದ ಅರಣ್ಯನಾಶಕ್ಕೆ ಒಪ್ಪಿಗೆ ನೀಡಿದೆ!
ಈ ಯೋಜನೆಯಿಂದ ಗೇರುಸೊಪ್ಪಾದಿಂದ ಹೊನ್ನಾವರದವರೆಗಿನ ರೈತರು ಅತಂತ್ರರಾಗಲಿದ್ದಾರೆ. ಇದರ ಪೂರ್ವಭಾವಿಯಾಗಿ ಸರ್ಕಾರ ಗೇರುಸೊಪ್ಪಾ, ಕುದರಗಿ ಪಂಚಾಯತಗಳ ರೈತರಿಗೆ ಒಕ್ಕಲೆಬ್ಬಿಸುವ ಉದ್ದೇಶದ ನೋಟಿಸ್ ನೀಡುವ ತಯಾರಿಯಲ್ಲಿದೆ. ಯಾವುದೇ ಪ್ರಯೋಜನವಿಲ್ಲದ ಈ ಯೋಜನೆ ಜಾರಿಯಾದರೆ ರೈತರ ಜೊತೆ ಮೀನುಗಾರರು ಸಹ ಅತಂತ್ರರಾಗಲಿದ್ದಾರೆ. ಹೀಗಾಗಿ ಹೊನ್ನಾವರ ಭಾಗದ ಜನರ ಆತಂಕ ಇನ್ನಷ್ಟು ಹೆಚ್ಚಾಗಿದೆ.
ಶರಾವತಿ ಭೂಗತ ಜಲವಿದ್ಯುತ್ ಯೋಜನೆ ಬಗ್ಗೆ ನಗರಬಸ್ತೀಕೇರಿ ಗ್ರಾಮಪಂಚಾಯತ ಗ್ರಾಮ ಸಭೆ ನಡೆಸಿತು. ಈ ಸಭೆಗೆ ಪರಿಸರ ತಜ್ಞರನ್ನು ಆಹ್ವಾನಿಸಲಾಗಿತ್ತು. ಈ ಸಭೆಯಲ್ಲಿ ಸಮಾಜಕಲ್ಯಾಣ ಇಲಾಖೆಯವರು ನೀಡಿದ ನೋಟೀಸ್ ವಿಷಯವನ್ನು ಗ್ರಾಮ ಪಂಚಾಯತದವರು ಬಹಿರಂಗ ಪಡಿಸಿದಾಗ ರೈತರು, ಪರಿಸರ ಕಾರ್ಯಕರ್ತರು ಅಚ್ಚರಿ ವ್ಯಕ್ತಪಡಿಸಿದ್ದರು. ಜೊತೆಗೆ ಅದನ್ನು ವಿರೋಧಿಸಿದ್ದರು. `ನಗರ ಬಸ್ತೀಕೇರಿ ಹಾಗೂ ಕುದರಗಿ ಪಂಚಾಯತ ವ್ಯಾಪ್ತಿಯ 70 ಜನ ರೈತರು, ವನವಾಸಿಗಳ ರೈತರ ಭೂಮಿ ಶರಾವತಿ ಭೂಗತ ಯೋಜನೆ ವ್ಯಾಪ್ತಿಯಲ್ಲಿ ಬರಲಿದೆ’ ಎಂಬ ವಿಷಯ ಆ ದಿನವೇ ಅರಿವಿಗೆ ಬಂದಿತು.
ಇನ್ನೂ ಈ ಮೂಲಕ ಕರ್ನಾಟಕ ಪವರ ಕಾರ್ಪೊರೇಶನ್ ರೈತರನ್ನು ಒಕ್ಕಲೆಬ್ಬಿಸುವ ವಿಷಯವನ್ನು ಮುಚ್ಚಿಟ್ಟಿದೆ ಎಂದು ಪರಿಸರ ಸಂಘಟನೆಗಳು ಆರೋಪಿಸಿವೆ. ಸ್ಥಳೀಯ ಅರಣ್ಯ ಅಧಿಕಾರಿಗಳ ವರದಿ ಬದಿಗೊತ್ತಿರುವ ರಾಜ್ಯ ಅರಣ್ಯ ಇಲಾಖೆ ವಿವರ ಯೋಜನಾ ವರದಿ ಇಲ್ಲದಿದ್ದರೂ ಅನುಮತಿ ನೀಡಿರುವುದು ಹಲವು ಅನುಮಾನಗಳನ್ನು ಹುಟ್ಟಿಹಾಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ಗೇರುಸೊಪ್ಪಾದಿಂದ ಹೊನ್ನಾವರವರೆಗಿನ ನದಿ ಪರಿಸ್ಥಿತಿ ಬಗ್ಗೆ ಉಲ್ಲೇಖ ಮಾಡುವುದೇ ಇಲ್ಲ. ಗೇರುಸೊಪ್ಪಾದಲ್ಲಿ ಹೊರಬರುವ ನೀರನ್ನೆಲ್ಲ ಪಂಪ್ಮಾಡಿ ಜೋಗಕ್ಕೆ ಕೊಂಡೊಯ್ದರೆ ಕೆಳ ಭಾಗದ ನದಿ ತೀರದ ಪರಿಸ್ಥಿತಿ ಏನು? ಎಂಬ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ.
`ಇಲ್ಲಿ ಉಪ್ಪು ನೀರು ಮೇಲೆ ಬರಲಿದೆ. ಸಿಹಿ ನೀರಿಲ್ಲದೇ ಕೃಷಿ-ತೋಟಗಾರಿಕೆ ಬದುಕು ಅತಂತ್ರ ಆಗಲಿದೆ. ಮೀನುಗಾರಿಕೆ ನಶಿಸಲಿದೆ. ಉಸುಕು ಉದ್ಯಮ ನೆಲ ಕಚ್ಚಲಿದೆ. ಹೊನ್ನಾವರ ಮತ್ತು ಮುರುಡೇಶ್ವರ ಮತ್ತು ತಾಲೂಕಿನ ಹಳ್ಳಿಗಳ ಕುಡಿಯುವ ನೀರಿನ ಯೋಜನೆಗಳು ಸಂಪೂರ್ಣ ವಿಫಲ ಆಗಲಿವೆ’ ಎಂದು ವಿಜ್ಞಾನಿಗಳು ಎಚ್ಚರಿಸಿದರೂ ಅದು ಸರ್ಕಾರಕ್ಕೆ ತಲುಪಿಲ್ಲ. ಹೊನ್ನಾವರ ತಾಲೂಕಿನ ಜೀವ ನಾಡಿಯಾದ ಶರಾವತಿ ನದಿ ಬತ್ತಿ ಹೋದರೆ ಕರಾವಳಿ ಹಳ್ಳಿಗಳು ಜೀವಕಳೆದುಕೊಳ್ಳಲಿವೆ. ಅಲ್ಲದೇ ಭೂಕುಸಿತವನ್ನು ಅಲ್ಲಗಳೆಯುವ ಹಾಗಿಲ್ಲ.
ಈ ಎಲ್ಲಾ ವಿಷಯಗಳ ಬಗ್ಗೆ ವೃಕ್ಷಲಕ್ಷ ಆಂದೋಲನದವರು ಇದೀಗ ಜನಪ್ರತಿನಿಧಿಗಳಿಗೆ ಪತ್ರ ಬರೆದಿದ್ದಾರೆ. ಜನಪ್ರತಿನಿಧಿಗಳು ಆ ಪತ್ರ ಓದುತ್ತಾರಾ? ಅಥವಾ ಕಸದ ಬುಟ್ಟಿಗೆ ಎಸೆಯುತ್ತಾರಾ? ಎಂಬ ಬಗ್ಗೆಯೂ ಸಾಕಷ್ಟು ಚರ್ಚೆ ನಡೆದಿದೆ.