34 ವರ್ಷ ಕಳೆದರೂ ಮದುವೆಯಾಗದ ಕಾರಣ ಮಂಜುನಾಥ ನಾಯ್ಕ ಅವರಿಗೆ ಕುಟುಂಬದವರೆಲ್ಲರೂ ಸೇರಿ ಮದುವೆ ತಯಾರಿ ನಡೆಸಿದ್ದರು. ಆದರೆ, ಮದುವೆ ಆಗುವುದಕ್ಕೆ ಹೆದರಿದ ಮಂಜುನಾಥ ನಾಯ್ಕ ಮನೆ ಬಿಟ್ಟು ಹೋಗಿದ್ದಾರೆ!
ದಾಂಡೇಲಿ ಗಾಂವಠಣದ ಮಂಜುನಾಥ ನಾಯ್ಕ ಅವರು ದಾಂಡೇಲಿಯ ಪೆಪರ್ ಮಿಲ್’ನಲ್ಲಿ ಕೆಲಸ ಮಾಡುತ್ತಾರೆ. ಕೈ ತುಂಬ ಸಂಬಳವಿದ್ದರೂ ಮಂಜುನಾಥ ನಾಯ್ಕ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿರಲಿಲ್ಲ. ಮನೆಗೆ ಬಂದು ಹೋಗುವವರೆಲ್ಲರೂ ಮಂಜುನಾಥ ನಾಯ್ಕ ಅವರ ಮದುವೆ ಬಗ್ಗೆಯೇ ಮಾತನಾಡುತ್ತಿದ್ದರು. ಇದರಿಂದ ಬೇಸತ್ತ ಅವರ ಕುಟುಂಬದವರು ಮಂಜುನಾಥ ನಾಯ್ಕ ಅವರಿಗೆ ಮದುವೆ ಮಾಡಲು ನಿಶ್ಚಯಿಸಿದ್ದರು.
ವರ್ಷಗಳ ಕಾಲ ಹುಡುಕಾಟ ನಡೆಸಿ ಕನ್ಯೆಯನ್ನು ಆರಿಸಿದರು. ಮದುವೆಗೆ ದಿನಾಂಕವನ್ನು ನಿಗದಿ ಮಾಡಿದರು. ಆದರೆ, ಮಂಜುನಾಥ ನಾಯ್ಕರಿಗೆ ಆ ಕನ್ಯೆಯನ್ನು ವರಿಸಲು ಮನಸ್ಸಿರಲಿಲ್ಲ. ಈ ಬಗ್ಗೆ ಮನೆಯಲ್ಲಿ ಹೇಳಿದರೂ ಕುಟುಂಬದವರು ಅದನ್ನು ಕಿವಿಗೆ ಹಾಕಿಕೊಂಡಿರಲಿಲ್ಲ. ಹೆಚ್ಚು ಕಡಿಮೆ ಮದುವೆ ದಿನಾಂಕವೂ ನಿಗದಿಯಾಗಿದ್ದರಿಂದ ಮಂಜುನಾಥ ನಾಯ್ಕ ತಲೆಬಿಸಿ ಮಾಡಿಕೊಂಡಿದ್ದರು.
`ಇಷ್ಟವಿಲ್ಲದ ಹುಡುಗಿ ಜೊತೆ ಮದುವೆ’ ಎಂಬ ಕಾರಣಕ್ಕೆ ಅವರು ಬೇಸರದಲ್ಲಿರುತ್ತಿದ್ದರು. ಜನವರಿ 29ರವರೆಗೂ ಮನೆಯಲ್ಲಿದ್ದ ಅವರು ಆ ದಿನ ಬೆಳಗ್ಗೆ 9.30ರ ಆಸುಪಾಸಿಗೆ ಮನೆ ಬಿಟ್ಟು ಹೋದರು. ಕುಟುಂಬದವರೆಲ್ಲರೂ ಸೇರಿ ಹುಡುಕಿದರೂ ಮಂಜುನಾಥ ನಾಯ್ಕ ಸಿಗಲಿಲ್ಲ. ಪೆಪರ್ ಮಿಲ್’ನ ಕೆಲಸಕ್ಕೆ ಸಹ ಅವರು ಹಾಜರಾಗಲಿಲ್ಲ. ಸಂಬoಧಿಕರು ಹಾಗೂ ಸ್ನೇಹಿತರ ಬಳಿ ವಿಚಾರಿಸಿದಾಗಲೂ ಯಾವುದೇ ಸುಳಿವು ಸಿಕ್ಕಿಲ್ಲ. ಹೀಗಾಗಿ ಮದುವೆಗೆ ಅಗತ್ಯವಿರುವ ವರನನ್ನು ಹುಡುಕಿಕೊಡಿ ಎಂದು ಮಂಜುನಾಥ ನಾಯ್ಕರ ತಂದೆ ಬೀರಪ್ಪ ನಾಯ್ಕ ಪೊಲೀಸ್ ದೂರು ನೀಡಿದ್ದಾರೆ. ಪೊಲೀಸರು ಸಹ ಮಂಜುನಾಥ ನಾಯ್ಕರಿಗಾಗಿ ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ.