ಅತಿವೃಷ್ಠಿ ಪರಿಣಾಮ ಸಾಕಷ್ಟು ಪ್ರಮಾಣದಲ್ಲಿ ಅಡಿಕೆ ಬೆಳೆ ಹಾನಿಯಾದರೂ ವಿಮಾ ಕಂಪನಿ ಅಡಿಕೆ ಬೆಳೆಗಾರರಿಗೆ ಪರಿಹಾರ ವಿತರಿಸಿಲ್ಲ. ವಿಮಾ ಪರಿಹಾರಕ್ಕಾಗಿ ಆಗ್ರಹಿಸಿ ರೈತರು ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದರೂ ವಿಮಾ ಕಂಪನಿ ಸ್ಪಂದಿಸಿಲ್ಲ.
ವಿವಿಧ ರೋಗ, ಕೂಲಿ ಕಾರ್ಮಿಕರ ಕೊರತೆ, ಪೃಕೃತಿ ವಿಕೋಪ ಸೇರಿ ನಾನಾ ಸಮಸ್ಯೆಗಳಿಂದ ಅಡಿಕೆ ಬೆಳೆಗಾರರು ತೊಂದರೆಗೆ ಸಿಲುಕಿದ್ದಾರೆ. ಈ ನಡುವೆ ಅಡಿಕೆಗೆ ಮಾಡಿಸಿದ ವಿಮೆ ಬೆಳಗಾರರಿಗೆ ಅಲ್ಪ ಪ್ರಮಾಣದ ನಷ್ಟವನ್ನು ಸರಿದೂಗಿಸುತ್ತಿದ್ದು, ಈ ಬಾರಿ ವಿಮೆ ಪರಿಹಾರ ವಿಷಯದಲ್ಲಿಯೂ ದೊಡ್ಡ ಅನ್ಯಾಯವಾಗಿದೆ. ಹೀಗಾಗಿ ಸ್ವತಃ ಅಡಿಕೆ ಬೆಳೆಗಾರರಾಗಿರುವ ಶಾಸಕ ಶಿವರಾಮ ಹೆಬ್ಬಾರ್ ಅಡಿಕೆ ವಿಮಾ ಪರಿಹಾರದ ಕುರಿತು ಧ್ವನಿ ಎತ್ತಿದ್ದಾರೆ. ವಿಮಾ ಕಂಪನಿ ರೈತರಿಗೆ ಮಾಡುತ್ತಿರುವ ಮೋಸಗಳನ್ನು ಅವರು ಬಯಲಿಗೆಳೆದಿದ್ದಾರೆ. ಜೊತೆಗೆ ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿ ವಿಮಾ ಕಂಪನಿಯ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸುವುದಾಗಿಯೂ ಹೇಳಿದ್ದಾರೆ.
ರಾಜ್ಯದ 10 ಜಿಲ್ಲೆಗಳ 7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಉತ್ತರ ಕನ್ನಡಹೊರತುಪಡಿಸಿ ಬಹುತೇಕ ಬೇರೆ ಎಲ್ಲಾ ಜಿಲ್ಲೆಗಳಲ್ಲಿಯೂ ಅಡಿಕೆ ವಿಮಾ ಪರಿಹಾರ ರೈತರ ಖಾತೆಗೆ ಸಮಯಕ್ಕೆ ಸರಿಯಾಗಿ ಜಮಾ ಆಗಿದೆ. ಆದರೆ, ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಮಾತ್ರ ವಿಮಾ ಕಂಪನಿ ತಪ್ಪಾದ ಅಂಕಿ-ಅAಶಗಳನ್ನು ಮುಂದಿರಿಸಿ ಅನ್ಯಾಯ ಮಾಡಿದೆ. ಕೆಡಿಸಿಸಿ ಬ್ಯಾಂಕ್ ಈ ವರ್ಷ ಕೆಡಿಸಿಸಿ ಬ್ಯಾಂಕ್ 1100ಕೋಟಿ ರೂ ಬೆಳೆ ಸಾಲ ವಿತರಣೆ ಮಾಡಿದೆ. ಸೊಸೈಟಿ ಮೂಲಕ ಬೆಳೆಸಾಲ ಪಡೆದ ಬಹುತೇಕ ರೈತರು ಬೆಳೆ ವಿಮೆ ಕಂತು ಪಾವತಿಸಿದ್ದಾರೆ. ಆದರೆ, ಈ ವರ್ಷ ಪಾವತಿಸಿದ ಕಂತಿನ ಮೊತ್ತ ಸಹ ಪರಿಹಾರ ರೂಪದಲ್ಲಿ ರೈತರ ಖಾತೆಗೆ ಬಂದಿಲ್ಲ.
ಕಳೆದ ಸಾಲಿನಲ್ಲಿ ಉತ್ತರ ಕನ್ನಡ ಜಿಲ್ಲೆಗೆ 76 ಕೋಟಿ ರೂ ಬೆಳೆ ವಿಮೆ ಪರಿಹಾರ ದೊರೆತಿತ್ತು. ಆದರೆ, ಈ ಬಾರಿ 10.96 ಕೋಟಿ ರೂ ಮಾತ್ರ ಸಿಕ್ಕಿದೆ. ಕಳೆದ ಬಾರಿಗಿಂತಲೂ ಅತ್ಯಧಿಕ ಪ್ರಮಾಣದಲ್ಲಿ ಬೆಳೆ ಹಾನಿ ಆದರೂ ಪರಿಹಾರ ಮಾತ್ರ ಮರಿಚಿಕೆಯಾಗಿದೆ. ಹೀಗಾಗಿ ಕಳೆದ 25 ವರ್ಷಗಳಿಂದ ಕೆಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿ ಸದ್ಯ ಅಧ್ಯಕ್ಷರಾಗಿರುವ ಶಿವರಾಮ ಹೆಬ್ಬಾರ್ ಇದೀಗ ಬೆಳೆ ವಿಮೆ ಕಂಪನಿಯ ಬೆನ್ನು ಬಿದ್ದಿದ್ದಾರೆ. ಮೊದಲು ಸೌಹಾರ್ದಯುತವಾಗಿಯೇ ವಿಮಾ ಕಂಪನಿಗೆ ಮನವಿ ಮಾಡಿದ ಅವರು ಇದೀಗ ಕಂಪನಿಯ ಅನ್ಯಾಯದ ವಿರುದ್ಧ ದೊಡ್ಡದಾಗಿ ಗುಡುಗಿದ್ದಾರೆ. ಹವಾಮಾನ ಆಧರಿತ ಬೆಳೆ ವಿಮೆ ವಿಷಯದಲ್ಲಿ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಅವರು ಅಬ್ಬರಿಸಿದ್ದಾರೆ.
ಸದ್ಯ ಸಹಕಾರಿ ಸಂಘದ ಸಭೆ ನಡೆಸಿ ಅವರ ಅಭಿಪ್ರಾಯಗಳನ್ನು ಶಿವರಾಮ ಹೆಬ್ಬಾರ್ ಸಂಗ್ರಹಿಸಲಿದ್ದಾರೆ. ಅದಾದ ನಂತರ ಕಾನೂನು ತಜ್ಞರನ್ನು ಸಮಾಲೋಚಿಸಿ ಕೆಡಿಸಿಸಿ ಬ್ಯಾಂಕಿನಿoದಲೇ ವಿಮಾ ಕಂಪನಿ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ನಿರ್ಧರಿಸಿದ್ದಾರೆ. ಈ ಹಿಂದೆಯೂ ಕೆಲ ರೈತರು ನ್ಯಾಯಾಲಯದ ಮೆಟ್ಟಿಲೇರಿ ಯೋಗ್ಯ ವಿಮಾ ಪರಿಹಾರ ಪಡೆದ ಉದಾಹರಣೆಗಳಿವೆ. ಹೀಗಾಗಿ ಕೆಡಿಸಿಸಿ ಬ್ಯಾಂಕ್ ಮೂಲಕ ನ್ಯಾಯಾಲಯದ ಮೊರೆ ಹೋಗುವ ಶಿವರಾಮ ಹೆಬ್ಬಾರ್ ಅವರ ಈ ಪ್ರಯತ್ನವೂ ಯಶಸ್ವಿಯಾದರೆ ರೈತರಿಗೆ ಅದು ವರದಾನವಾಗಲಿದೆ.