ಪೂರ್ವಜರಿಂದ ಬಂದ ಭೂಮಿ ಹಕ್ಕಿನ ವಿಷಯವಾಗಿ ಮಾವ-ಅಳಿಯನ ನಡುವೆ ಹೊಡೆದಾಟ ನಡೆದಿದೆ. ಹೋಡೆದಾಟ ತಪ್ಪಿಸಲು ಬಂದ ಮಹಿಳೆಗೆ ಸಹ ಬೈಗುಳದ ಸುರುಮಳೆ ಸಿಕ್ಕಿದೆ.
ಹೊನ್ನಾವರ ತಾಲೂಕಿನ ಮೇಲಿನ ಇಡಗುಂಜಿಯ ಕುಳಿಮನೆಯಲ್ಲಿ ಸ್ಕೂಬಾ ಇನ್ಸಪೆಕ್ಟರ್ ವಿನೋದಕುಮಾರ ವಾಸವಾಗಿದ್ದಾರೆ. ಅವರ ತಮ್ಮ ಉದಯಕುಮಾರ ಹೆಸರಿನಲ್ಲಿ ವಾಸದ ಮನೆ ಮುಂದೆ 20 ಗುಂಟೆ ಭೂಮಿಯಿದ್ದು, ಇಬ್ಬರು ಸೇರಿ ತಾಯಿ ರಾಧಾ ಅವರ ಹೆಸರಿನಲ್ಲಿ ಜಿಪಿಎ ಮಾಡಿ ವಹಿವಾಟು ನಡೆಸುತ್ತಿದ್ದಾರೆ.
ರಾಧಾ ಅವರ ಅಣ್ಣ ಕಮಾಲಕರ ನಾಯ್ಕ ಸಹ ಅಲ್ಲಿನ ಹಳೆಯ ಕಟ್ಟಡದಲ್ಲಿ ವಾಸವಾಗಿದ್ದಾರೆ. ಅಲ್ಲಿರುವ 20 ಗುಂಟೆ ಭೂಮಿ ವಿಷಯದಲ್ಲಿ ಈ ಎರಡು ಕುಟುಂಬದವರ ನಡುವೆ ವೈಮನಸ್ಸಿದ್ದು, ಅದೇ ಹೊಡೆದಾಟಕ್ಕೆ ಕಾರಣವಾಗಿದೆ. ಫೆ 13ರಂದು ಜಮೀನಿನಲ್ಲಿರುವ ನೀರಿನ ಪಂಪು ಚಾಲು ಮಾಡಲು ವಿನೋದಕುಮಾರ ಹೋದಾಗ ಅವರನ್ನು ಕಮಲಾಕರ ನಾಯ್ಕ ಹಾಗೂ ಅವರ ಮಗ ಚಂದ್ರು ನಾಯ್ಕ ಅಡ್ಡಗಟ್ಟಿದ್ದಾರೆ.
`ಈ ಭೂಮಿಗೆ ನೀವು ಕಾಲಿಡುವ ಹಾಗಿಲ್ಲ’ ಎಂದು ತಾಕೀತು ಮಾಡಿದ್ದಾರೆ. ಈ ವೇಳೆ ಜಗಳ ನಡೆದಾಗ ಕಮಲಾಕರ ನಾಯ್ಕ ಕೈಯಲ್ಲಿದ್ದ ಕತ್ತಿ ಬೀಸಿದ್ದಾರೆ. ಜಗಳ ಬಿಡಿಸಲು ಬಂದ ತಂಗಿ ರಾಧಾಗೆ ಸಹ ಕಮಲಾಕರ ನಾಯ್ಕ ನಿಂದಿಸಿದ್ದಾರೆ. ಈ ವೇಳೆ ಅಲ್ಲಿದ್ದ ಚಂದ್ರು ನಾಯ್ಕ ಸಹ ಬೈದಿದ್ದು, ಕಮಲಾಕರ ನಾಯ್ಕರು ಕಲ್ಲು ತೂರಿದ್ದಾರೆ.
ಆ ಕಲ್ಲು ಉದಯಕುಮಾರ ಅವರ ಸೊಂಟಕ್ಕೆ ತಾಗಿದೆ. ಕತ್ತಿಯಿಂದ ಹೆಬ್ಬರಳಿಗೆ ಗಾಯ ಮಾಡಿರುವುದು ಹಾಗೂ ಕಲ್ಲಿನಿಂದ ಹೊಡೆದಿರುವ ಕಾರಣ ಉದಯಕುಮಾರ ಮಂಕಿ ಪೊಲೀಸ್ ಠಾಣೆಗೆ ತೆರಳಿ ಮಾವ ಹಾಗೂ ಮಾವನ ಮಗನ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.