ಶಿರಸಿ: ಕೂಲಿ ಕೆಲಸ ಮುಗಿಸಿ ಕೈ ಕಾಲು ತೊಳೆಯಲು ಕೆರೆಗೆ ಹೋದ ನಾಗರಾಜ ದೇವಾಡಿಗ (45) ಅದೇ ಕೆರೆಗೆ ಬಿದ್ದು ಸಾವನಪ್ಪಿದ್ದಾರೆ.
ಸೊಂದಾ ಕರ್ಕೋಳ್ಳಿಯ ನಾಗರಾಜ ರಾಮ ದೇವಾಡಿಗ (45) ಕೂಲಿ ಮಾಡಿ ಜೀವನ ನಡೆಸುತ್ತಿದ್ದರು. ಕೂಲಿ ಕೆಲಸಕ್ಕೆ ಹೋದರೆ 3-4 ದಿನದವರೆಗೂ ಅವರು ಮನೆಗೆ ಮರಳುತ್ತಿರಲಿಲ್ಲ. ಹೀಗೆ ಅಕ್ಟೊಬರ್ 22ರಂದು ಕೂಲಿ ಕೆಲಸಕ್ಕೆ ಹೋದ ಅವರು ಮನೆಗೆ ಮರಳಿದ್ದು ಶವವಾಗಿ!
ಆ ದಿನ ರಾತ್ರಿ ಆದರೂ ನಾಗರಾಜ ಮನೆಗೆ ಮರಳದ ಕಾರಣ ಪತ್ನಿ ಪವಿತ್ರ ಹಾಗೂ ಮಗ ಸುಬ್ರಹ್ಮಣ್ಯ ಎಲ್ಲಾ ಕಡೆ ಹುಡುಕಾಡಿದ್ದರು. ಆದರೆ ಪತ್ತೆ ಆಗಿರಲಿಲ್ಲ. ಮೊದಲಿನ ಹಾಗೇ ಮರ್ನಾಲ್ಕು ದಿನ ಬಿಟ್ಟು ಬರಬಹುದು ಎಂದು ಅವರು ಸುಮ್ಮನಾಗಿದ್ದರು. ಅಕ್ಟೊಬರ್ 25ರಂದು ಅಡ್ಡಸರ ಗದ್ದೆಯ ಕರ್ಕೊಳ್ಳಿ ಶ್ರೀಧರ ರಾಮಚಂದ್ರ ಶೇಟ್ ಅವರ ತೋಟದ ಕೆರೆಯಲ್ಲಿ ಶವವೊಂದು ಕಂಡಿದ್ದು, ಪವಿತ್ರ ದೇವಾಡಿಗ ಅಲ್ಲಿ ಹೋಗಿ ನೋಡಿದ್ದರು. ಆಗ, ಅವರ ಪತಿ ನಾಗರಾಜ ಸಾವನಪ್ಪಿರುವುದು ಖಚಿತವಾಗಿದೆ.
`ವಿಪರೀತ ಸರಾಯಿ ಕುಡಿಯುತ್ತಿದ್ದ ಅವರು ಕೂಲಿ ಕೆಲಸ ಮುಗಿಸಿ ಕಾಲು ತೊಳೆಯಲು ನೀರಿಗೆ ಇಳಿದಾಗ ಕಾಲು ಜಾರಿದೆ. ಅಲ್ಲಿಯೇ ಅವರು ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾರೆ’ ಎಂದು ಪವಿತ್ರ ದೇವಾಡಿಗ ಪೊಲೀಸ್ ದೂರು ನೀಡಿದ್ದಾರೆ.