ಶಿರಸಿ ದೇವನಳ್ಳಿ ಬಳಿಯ ಗಣಪತಿ ಗೌಡ ನೀರು ತರಲು ಕೆರೆಗೆ ಹೋದಾಗ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾರೆ.
ದೇವನಳ್ಳಿಯ ಕುದ್ರಗೋಡ ಗ್ರಾಮದ ಅಂಟಗದ್ದೆ ಕೆಳಾಸೆಯಲ್ಲಿ ಗಣಪತಿ ಗೌಡ (75)ವಾಸವಾಗಿದ್ದರು. ತಮ್ಮ ಮೊಮ್ಮಗ ತಿಮ್ಮ ಗೌಡ ಅವರ ಜೊತೆ ಅವರು ಪ್ರತ್ಯೇಕ ಮನೆ ಮಾಡಿಕೊಂಡಿದ್ದರು. ಮನೆ ಪಕ್ಕ ಕೆರೆಯಿದ್ದು, ಆ ಕೆರೆ ನೀರನ್ನು ಅವರು ನಿತ್ಯದ ಬಳಕೆಗೆ ಉಪಯೋಗಿಸುತ್ತಿದ್ದರು.
ಮಾರ್ಚ 7ರ ಸಂಜೆ 5 ಗಂಟೆ ಸುಮಾರಿಗೆ ಕೆರೆಯಿಂದ ನೀರು ತರಲು ಕೊಡಪಾನದ ಜೊತೆ ಗಣಪತಿ ಗೌಡ ಹೋಗಿದ್ದರು. ಆದರೆ, ರಾತ್ರಿ 9.30 ಕಳೆದರೂ ಅವರು ಮನೆಗೆ ಮರಳಿರಲಿಲ್ಲ. ಬೆಳಗ್ಗೆ ನೋಡಿದಾಗ ಕೆರೆಯಲ್ಲಿ ಅವರ ಶವ ತೇಲುತ್ತಿತ್ತು. ಜೊತೆಗೆ ಕೊಡಪಾನ ಸಹ ಅಲ್ಲಿಯೇ ಬಿದ್ದಿತ್ತು.
ಗಣಪತಿ ಗೌಡ ಮೊದಲಿನಿಂದಲೂ ಸರಾಯಿ ಕುಡಿಯುತ್ತಿದ್ದರು. ಅವರಿಗೆ ಈಜು ಸಹ ಬರುತ್ತಿರಲಿಲ್ಲ. ಹೀಗಾಗಿ ನೀರಿನಲ್ಲಿ ಕಾಲು ಜಾರಿ ಬಿದ್ದಾಗ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನೀರಿನಲ್ಲಿ ಮುಳುಗಿದ ಅವರು ಅಲ್ಲಿಯೇ ಉಸಿರುಗಟ್ಟಿ ಸಾವನಪ್ಪಿದರು.
ಈ ಬಗ್ಗೆ ಗಣಪತಿ ಗೌಡ ಅವರ ಪತ್ನಿ ಲಕ್ಷಿ ಗೌಡ ಪೊಲೀಸರಿಗೆ ಮಾಹಿತಿ ನೀಡಿದರು. ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಶವ ಪಡೆದರು.