ಹೊನ್ನಾವರ: ಸರ್ಕಾರಿ ಬಸ್ಸಿಗೆ ಲಾರಿ ಗುದ್ದಿದ ಪರಿಣಾಮ ಐದು ಜನ ಗಾಯಗೊಂಡಿದ್ದು, ಬಸ್ಸಿನಲ್ಲಿದ್ದ ಮಹಿಳಾ ಪ್ರಯಾಣಿಕರು ಕೋರ್ಟು-ಕಚೇರಿಗೆ ಓಡಾಟಕ್ಕೆ ಹೆದರಿ ದೂರು ನೀಡಿಲ್ಲ. 15 ವರ್ಷದ ಬಾಲಕನ ಸಹಕಾರದಿಂದ ಬಸ್ ಚಾಲಕ ಸೀರಾಜುದ್ಧೀನ್ ಅಪರಿಚಿತ ಲಾರಿ ಚಾಲಕನ ವಿರುದ್ಧ ದೂರು ದಾಖಲಿಸಿದರು.
ಹಾವೇರಿಯ ಸೀರಾಜುದ್ಧೀನ್ ಅಬ್ದುಲ್ ಸಾಬ್ ಖತೀಪ (46) ಹೀರೆಕೆರೂರು ಬಸ್ ಡಿಪೋ ಬಸ್ಸನ್ನು ಚಲಾಯಿಸುತ್ತಿದ್ದರು. ನವೆಂಬರ್ 1ರಂದು ಮಧ್ಯಾಹ್ನ ಹೊನ್ನಾವರದಿಂದ ಹೊರಟ ಅವರು ಉಪ್ಪೋಣಿ, ಗೇರುಸೊಪ್ಪದಲ್ಲಿಯೂ ಪ್ರಯಾಣಿಕರನ್ನು ಹತ್ತಿಸಿಕೊಂಡಿದ್ದರು. ಗೇರುಸೊಪ್ಪ ವೀವ್ ಪಾಯಂಟ್ ಹತ್ತಿರದ ತಿರುವಿನಲ್ಲಿ ಅವರ ಬಸ್ಸಿಗೆ ಲಾರಿ ಗುದ್ದಿತು.
ಸಾಗರದಿಂದ ಹೊನ್ನಾವರ ಕಡೆ ಹೊರಟಿದ್ದ ಲಾರಿ ಚಾಲಕ ವೇಗವಾಗಿ ಬಂದು ಬಸ್ಸಿಗೆ ಎದುರಿನಿಂದ ಡಿಕ್ಕಿ ಹೊಡೆದಿದ್ದು, ಮೂವರು ಮಹಿಳಾ ಪ್ರಯಾಣಿಕರು ಗಾಯಗೊಂಡಿದ್ದರು. ಅಪಘಾತದ ರಭಸಕ್ಕೆ ಬಸ್ಸಿನ ನಿವಾಹಕಿ ಮಬಿನಾಬಾನು ವಾಹಿಬ್ ಸಾಬ್ (33) ಕಾಲು ಮಂಡಿಗೆ ಗಾಯವಾಗಿತ್ತು. ಆದರೆ, ಬಸ್ಸಿನ ನಿರ್ವಾಹಕಿ ಮಬಿನಾಬಾನು ಸೇರಿ ಬಸ್ಸಿನಲ್ಲಿದ್ದ ಮಹಿಳಾ ಪ್ರಯಾಣಿಕರು ಪೊಲೀಸ್ ದೂರು ನೀಡಲು ಮುಂದಾಗಲಿಲ್ಲ. ಹೊನ್ನಾವರ ಹೆರೆಅಂಗಡಿಯ ಅಮಾನ್ ಗಫೂರ್ ಸಾಬ್ (15) ಎಂಬ ಶಾಲಾ ವಿದ್ಯಾರ್ಥಿಗೂ ಈ ಅಪಘಾತದಲ್ಲಿ ಗಾಯವಾಗಿದ್ದು, ಸಾಕ್ಷಿಗಾಗಿ ಆತನ ನೆರವು ಪಡೆದು ಬಸ್ ಚಾಲಕ ಸೀರಾಜುದ್ಧೀನ್ ಪೊಲೀಸ್ ದೂರು ದಾಖಲಿಸಿದರು.
ಅಪಘಾತದಲ್ಲಿ ಗಾಯಗೊಂಡ ಮಹಿಳೆಯರು ಆಂಬುಲೆನ್ಸ ಕರೆಯಿಸಿದರೂ ಆಸ್ಪತ್ರೆಗೆ ಹೋಗಲಿಲ್ಲ. `ಸಣ್ಣ-ಪುಟ್ಟ ಗಾಯವಾಗಿದೆ. ಪರವಾಗಿಲ್ಲ’ ಎನ್ನುತ್ತ ಅವರು ಮನೆಗೆ ತೆರಳಿದರು. ಅಪಘಾತ ನಡೆದ ತಕ್ಷಣ ಲಾರಿ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದು, ಆತನ ಹೆಸರು ಸಹ ಗೊತ್ತಾಗಲಿಲ್ಲ. ಲಾರಿ ಹಾಗೂ ಬಸ್ಸನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.