ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ `ಸ್ವಚ್ಛ ಭಾರತ’ ಶಿರಸಿ ಆಡಳಿತ ಸಂಪೂರ್ಣವಾಗಿ ಮರೆತಿದೆ. ನಗರದ ದೊಡ್ಡ ಕಾಲುವೆಯಲ್ಲಿ ದಿನದಿಂದ ದಿನಕ್ಕೆ ತ್ಯಾಜ್ಯದ ಪ್ರಮಾಣ ಹೆಚ್ಚುತ್ತಿದ್ದು, ಅದನ್ನು ಸ್ವಚ್ಛಗೊಳಿಸುವ ಆಸಕ್ತಿ ನಗರಸಭೆಗೂ ಇಲ್ಲ!
ಈ ಕಾಲುವೆಯಲ್ಲಿ ಕಸಕಡ್ಡಿಗಳು, ಪ್ಲಾಸ್ಟಿಕ್ ಜೊತೆ ಜೈವಿಕ ತ್ಯಾಜ್ಯಗಳು ಕೊಳೆಯುತ್ತಿವೆ. ಇದರಿಂದ ಸುತ್ತಲಿನ ಪರಿಸರ ಗಬ್ಬೆದ್ದಿದ್ದು, ಕಾಲುವೆ ನೀರು ಹರಿದು ಹೋಗಲು ದಾರಿಯಿಲ್ಲ. ತ್ಯಾಜ್ಯದ ನೀರು ಹರಿಯಲು ಸಮತಲ ಚರಂಡಿ ಇಲ್ಲದ ಕಾರಣ ಎಲ್ಲೆಂದರಲ್ಲಿ ನೀರು ನಿಲ್ಲುತ್ತಿದೆ. ಐತಿಹಾಸಿಕ ಕೋಟೆ ಕೆರೆ ಅಂಚಿನಲ್ಲಿಯೂ ಗಲೀಜು ನೀರು ನಿಲ್ಲುತ್ತಿದೆ.
ಕಳೆದ ಮೂರು ವರ್ಷಗಳಿಂದ ದೊಡ್ಡ ಕಾಲುವೆಯ ತ್ಯಾಜ್ಯ ನಿರ್ವಹಣೆ ಕೆಲಸ ನಡೆದಿಲ್ಲ. ಗಲೀಜು ನೀರು ಹರಿದು ಹೋಗಲು ಕೋಟೆ ಕೆರೆಯ ಮುಖ್ಯ ರಸ್ತೆಯ ಹೆದ್ದಾರಿ ಸಿಡಿ ಕಾಲುವೆಗಿಂತ ಒಂದು ಅಡಿಯಷ್ಟು ಎತ್ತರದಲ್ಲಿದೆ. ಇದರಿಂದ ಗಲೀಜು ನೀರು ಕುಡಿಯವು ನೀರಿನ ಬಾವಿಗೆ ಸೇರುವ ಆತಂಕವೂ ಸೃಷ್ಠಿಯಾಗಿದೆ. ಚರಂಡಿ ಸ್ವಚ್ಚತೆ ಸಮಸ್ಯೆಯಿಂದ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.
ದೊಡ್ಡ ಕಾಲುವೆ ಸುತ್ತಲು ಸಾರ್ವಜನಿಕರು ವಾಸಿಸುವ ಮನೆಗಳಿವೆ. ಅಲ್ಲಿನ ಸ್ಥಳೀಯರಿಗೆ ಮೂಗು ಮುಚ್ಚಿಕೊಂಡು ಓಡಾಡುವುದು ಅನಿವಾರ್ಯವಾಗಿದೆ. ಇನ್ನೂ ಸಂಜೆ ವೇಳೆಯ ಸೊಳ್ಳೆ ಕಾಟಕ್ಕೆ ಮುಕ್ತಿ ಸಿಕ್ಕಿಲ್ಲ. ಕೋಟೆಕೆರೆ ಭಾಗದಲ್ಲಿರುವ ದೊಡ್ಡ ಕಾಲುವೆ ಮಲೀನವಾಗಿದ್ದು ಗಮನಕ್ಕಿದ್ದರೂ ಹೂಳೆತ್ತಲು ಅನುದಾನ ಕೊರತೆ ಎಂಬ ಮಾತು ಆಡಳಿತದಲ್ಲಿದ್ದವರದ್ದಾಗಿದೆ.