ಬೆಂಗಳೂರಿನಿoದ ಯಾಣಕ್ಕೆ ಬಂದಿದ್ದ 25 ಪ್ರವಾಸಿಗರು ಯಾಣದ ಕಾಡಿನಲ್ಲಿ ದಿಕ್ಕೆಟ್ಟಿದ್ದು, ಈ ವೇಳೆ ಮಹಿಳೆಯೊಬ್ಬರು ರವಾನಿಸಿದ ತುರ್ತು ಸಂದೇಶ ಎಲ್ಲಾ ಪ್ರವಾಸಿಗರನ್ನು ರಕ್ಷಿಸಿದೆ.
ಫೆ 16ರಂದು ಬೆಂಗಳೂರಿನ 8 ಹುಡುಗಿಯರು ಹಾಗೂ 16 ಹುಡುಗರ ಜೊತೆ ಪ್ರವಾಸಿ ಮಾರ್ಗದರ್ಶಕರೊಬ್ಬರು ಉತ್ತರ ಕನ್ನಡ ಜಿಲ್ಲೆಯ ಪ್ರವಾಸಕ್ಕೆ ಬಂದಿದ್ದರು. ಎರಡು ಮಿನಿ ಬಸ್ ಮೂಲಕ ಯಾಣ ತಲುಪಿದ ಅವರು ಅಲ್ಲಿಂದ ಮರಳುವಾಗ ದಾರಿ ತಪ್ಪಿದರು. ರಾತ್ರಿ ಯಾಣ ಗುಡ್ಡ ತಿರುವಿನಲ್ಲಿ ಅವರಿದ್ದ ಮಿನಿ ಬಸ್ ಸಹ ಕೈ ಕೊಟ್ಟಿತು. ಅಕ್ಕ-ಪಕ್ಕದ ಕಾಡು ಹಾಗೂ ನಿರ್ಜನ ಪ್ರದೇಶ ನೋಡಿದ ಪ್ರವಾಸಿಗರು ಬೆದರಿದರು. ಯಾರ ಮೊಬೈಲಿನಲ್ಲಿ ಸಹ ನೆಟ್ವರ್ಕ ಕಾಣುತ್ತಿರಲಿಲ್ಲ.
ಈ ನಡುವೆ ಆ ಬಸ್ಸಿನಲ್ಲಿದ್ದ ಅಗಲ್ಯ ಪ್ರಿಯದರ್ಶಿನಿ ಎಂಬಾತರು ಪೊಲೀಸರಿಗೆ ಸಹಾಯಕ್ಕಾಗಿ ಮನವಿ ರವಾನಿಸಿದರು. ಸಾಕಷ್ಟು ಪ್ರಯತ್ನದ ನಂತರ ಸಣ್ಣ ಮೊಬೈಲ್ ಸಿಗ್ನಲ್ ಮೂಲಕ ಅವರ ಮೆಸೆಜ್ ಪೊಲೀಸರಿಗೆ ತಲುಪಿತು. 112 ವಾಹನದ ಮೂಲಕ ಪೊಲೀಸ್ ಸಿಬ್ಬಂದಿ ಸಂತೋಷ ಮಾಳಗೌಡರ್, ಮಹೇಶ ನಾಯ್ಕ ಹಾಗೂ ಪಂಡರಿನಾಥ ಮುಂಬೈಕರ್ ಯಾಣದ ಕಡೆ ಸಂಚರಿಸಿದರು. ಆದರೆ, ಮೆಸೆಜ್ ಕಳುಹಿಸಿದ ಮಹಿಳೆಯ ಮೊಬೈಲ್ ಸಹ ವ್ಯಾಪ್ತಿ ಪ್ರದೇಶದಿಂದ ಹೊರಗೆ ಹೋಗಿತ್ತು.
ಸಾಕಷ್ಟು ಹುಡುಕಾಟ ನಡೆಸಿದ ನಂತರ ಗುಡ್ಡದ ತಪ್ಪಲಿನ ತಿರುವಿನಲ್ಲಿ ಎರಡು ಮಿನಿ ಬಸ್ ಕಾಣಿಸಿತು. ಅಲ್ಲಿ ಬಸ್ ಸಿಲುಕಿಕೊಂಡಿದನ್ನು ಗಮನಿಸಿದ ಪೊಲೀಸರು ಜೆಸಿಬಿ ಯಂತ್ರವನ್ನು ಸ್ಥಳಕ್ಕೆ ಕರೆಯಿಸಿದರು. ಆ ಬಸ್ಸುಗಳನ್ನು ಮೇಲೆತ್ತಿದರು. ಜೊತೆಗೆ ಇನ್ನೊಂದು ಮಿನಿ ಬಸ್ ಮಾಡಿಸಿ ಅಲ್ಲಿದ್ದ ಪ್ರವಾಸಿಗರನ್ನು ಹಿಲ್ಲೂರಿನ ಮುಖ್ಯ ರಸ್ತೆಗೆ ತಂದು ಬಿಟ್ಟರು.
ಅಲ್ಲಿಂದ ಇನ್ನೊಂದು ವಾಹನದ ಮೂಲಕ ಎಲ್ಲಾ ಪ್ರವಾಸಿಗರು ಬೆಂಗಳೂರು ಸೇರಿದರು. ರಾತ್ರಿ ವೇಳೆಯ ತುರ್ತು ಸನ್ನಿವೇಶದಲ್ಲಿಯೂ ಸಹನೆಯಿಂದ ವರ್ತಿಸಿ ಸಹಾಯ ಮಾಡಿದ ಪೊಲೀಸರಿಗೆ ಪ್ರವಾಸಿಗರು ಕೃತಜ್ಞತೆ ಸಲ್ಲಿಸಿದರು.