ಸರ್ಕಾರದಿಂದ ದೊರೆಯುವ ಉಚಿತ ವಿದ್ಯುತ್ ಹಾಗೂ ಬೆಟ್ಟದ ಮಣ್ಣು ಬಳಸಿ ಇಟ್ಟಿಗೆ ತಯಾರಿಸುತ್ತಿದ್ದವರ ಮೇಲೆ ಮುಂಡಗೋಡಿನ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಲ್ಲಿದ್ದ ರೈತರು ಅಧಿಕಾರಿಗಳ ಕಾಲಿಗೆ ಬಿದ್ದರೂ ಕೇಳದೇ ದಾಸ್ತಾನು ಮಾಡಿದ್ದ ಇಟ್ಟಿಗೆಗಳನ್ನು ಜೆಸಿಬಿ ಯಂತ್ರಗಳ ಮೂಲಕ ಧ್ವಂಸ ಮಾಡಿದ್ದಾರೆ.
ಕಳೆದ ಕೆಲವು ತಿಂಗಳಿoದ ಅನೇಕ ರೈತರು ಕೃಷಿ ಜಮೀನುಗಳಲ್ಲಿ ಹಲವರು ಅನಧಿಕೃತವಾಗಿ ಇಟ್ಟಿಗೆ ತಯಾರು ಮಾಡುತ್ತಿದ್ದರು. ಕೆಲವೆಡೆ ಜಮೀನಿನ ಮೂಲ ಮಾಲೀಕರು, ಇಟ್ಟಿಗೆ ತಯಾರಿಸುವ ಉದ್ಯಮಿಗಳಿಗೆ ಜಮೀನನ್ನು ಬಾಡಿಗೆ ಆಧಾರದ ಮೇಲೆ ನೀಡಿದ್ದರು. 30ಕ್ಕೂ ಅಧಿಕ ರೈತರಿಗೆ ತಹಶೀಲ್ದಾರ್ ಕಚೇರಿಯಿಂದ ನೋಟಿಸ್ ನೀಡಲಾಗಿತ್ತು. ಅದಾಗಿಯೂ ಇಟ್ಟಗಿ ತಯಾರಿಕಾ ಘಟಕ ನಿಂತಿರಲಿಲ್ಲ. ಈ ಹಿನ್ನಲೆ ಫೆ 18ರಂದು ತಹಶೀಲ್ದಾರ್ ಶಂಕರ ಗೌಡಿ ದಾಳಿ ನಡೆಸಿದರು.
ಸಿದ್ಧಪಡಿಸಿದ ಇಟ್ಟಿಗೆ ಭಟ್ಟಿಗಳನ್ನು ಅವರು ಜೆಸಿಬಿ ಮೂಲಕ ಧ್ವಂಸ ಮಾಡಿಸಿದರು. ಈ ವೇಳೆ ರೈತರು-ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ಕೊನೆಗೆ ರೈತರು ಅಧಿಕಾರಿಗಳ ಕಾಲಿಗೆ ಬಿದ್ದು ಬೇಡಿಕೊಂಡರು. ಆದರೂ, ಕೇಳದೇ ಅಕ್ರಮ ಇಟ್ಟಿಗೆ ಭಟ್ಟಿಗಳನ್ನು ನಾಶ ಮಾಡಿದರು. ಕೆಲವರು ಒಂದು ಬಾರಿ ವಿನಾಯತಿ ನೀಡಿದರೆ ಬೇರೆ ಕಡೆ ಸ್ಥಳಾಂತರ ಮಾಡುವುದಾಗಿ ಹೇಳಿದ್ದು, ಅಂಥ ಕೆಲವರಿಗೆ ಮಾತ್ರ ಒಂದುವಾರದ ಅವಕಾಶವನ್ನು ನೀಡಿದರು.
ಕೆಲವೆಡೆ ಮೂರರಿಂದ ನಾಲ್ಕು ಎಕರೆ ಕೃಷಿ ಜಮೀನುಗಳಲ್ಲಿ ಬೃಹತ್ ಪ್ರಮಾಣದ ಇಟ್ಟಿಗೆ ತಯಾರು ಮಾಡಿರುವುದು ದಾಳಿಯ ವೇಳೆ ಕಂಡು ಬಂದಿತು. ಯಾವುದೇ ಅನುಮತಿ ಇಲ್ಲದೇ ದೊಡ್ಡ ಪ್ರಮಾಣದಲ್ಲಿ ಇಟ್ಟಿಗೆ ತಯಾರಿಕೆ, ದಾಸ್ತಾನು ಮಾಡಿರುವ ಬಗ್ಗೆ ಅಧಿಕಾರಿಗಳು ಅಚ್ಚರಿ ವ್ಯಕ್ತಪಡಿಸಿದರು. ಅಲ್ಲಿ ಕೆಲಸ ಮಾಡುವವರಿಗೆ ಸೂಕ್ತ ವೇತನ ನೀಡದಿರುವುದು, ರಾತ್ರಿ ವೇಳೆ ಇಟ್ಟಿಗೆ ತಯಾರಿಸುತ್ತಿರುವ ಬಗ್ಗೆಯೂ ಅಧಿಕಾರಿಗಳು ಮಾಹಿತಿ ಪಡೆದರು.