ಹೊನ್ನಾವರ: ಊರು ಬಿಟ್ಟು ಊರಿಗೆ ದುಡಿಯಲು ಹೋದ ಶ್ರೀಧರ ನಾಯಕ ಕೊಲೆಯಾಗಿದ್ದಾರೆ. ಬಿಯರ್ ಬಾಟಲಿಯಿಂದ ಹೊಡೆದು ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.
ಹೊನ್ನಾವರದ ಕಾಸಕೋಡಿನ ಶ್ರೀಧರ ನಾಯಕ ಅಡುಗೆ ಮಾಡುವುದರಲ್ಲಿ ಪರಿಣಿತಿ ಪಡೆದಿದ್ದರು. ಊರಿನಲ್ಲಿ ಹೆಚ್ಚಿನ ದುಡಿಮೆ ಇಲ್ಲದ ಕಾರಣ ಅವರು ಮಣಿಪಾಲಿಗೆ ಹೋಗಿದ್ದರು. ಅಲ್ಲಿರುವ ಈಶ್ವರನಗರದ ಹೊಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಅಚ್ಚುಕಟ್ಟಾದ ಆಹಾರ ತಯಾರಿಸಿ ಅವರು ಅಲ್ಲಿನ ಗ್ರಾಹಕರ ಮನಗೆದ್ದಿದ್ದರು.
ಶುಕ್ರವಾರ ಬೆಳಗ್ಗೆ ಶ್ರೀಧರ ನಾಯಕ ಅವರ ಶವ ಮಣಿಪಾಲದ ಮುಖ್ಯರಸ್ತೆಯಲ್ಲಿ ಬಿದ್ದಿದೆ. ಅನಂತ ಕಲ್ಯಾಣ ಮಾರ್ಗದಲ್ಲಿ ಹೊಟೇಲ್ ಕಾರ್ಮಿಕ ಶ್ರೀಧರ ನಾಯಕ ಅವರನ್ನು ಬಿಯರ್ ಬಾಟಲಿಯಿಂದ ಹೊಡೆದು ದುಷ್ಕರ್ಮಿಗಳು ಸಾಯಿಸಿದ್ದಾರೆ. ನಾಲ್ಕು ಜನರ ಗುಂಪು ನಸುಕಿನ ವೇಳೆ ಇಲ್ಲಿ ಹೊಡೆದಾಡಿಕೊಂಡಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ.
ಯಾವ ಕಾರಣಕ್ಕೆ ಈ ಗಲಾಟೆ ಶುರುವಾಯಿತು? ಯಾವ ಕಾರಣದಿಂದ ಶ್ರೀಧರ ನಾಯಕ ಕೊಲೆಯಾದರು? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.