ತೋಟಗಾರಿಕಾ ಇಲಾಖೆ ಅಧಿಕಾರಿಯೊಬ್ಬರು ಫೇಸ್ಬುಕ್ ಜಾಹೀರಾತು ನೋಡಿ ಹಣ ಕಳೆದುಕೊಂಡಿದ್ದಾರೆ. ಷೇರು ಮಾರುಕಟ್ಟೆ ಮೂಲಕ ದುಪ್ಪಟ್ಟು ಹಣ ಕೊಡಿಸುವುದಾಗಿ ನಂಬಿಸಿ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಸೈಬರ್ ವಂಚಕರು ದೋಚಿದ್ದಾರೆ!
ದಾವಣೆಗೆರೆ ಮೂಲದ ಮಂಜಪ್ಪ ಪಿ ಅವರು ಬನವಾಸಿ ರಸ್ತೆಯ ಪ್ರತೀಕ್ ಬಿಲ್ಡಿಂಗ್ ವಾಸ ಮಾಡುತ್ತಿದ್ದು, ಬಿಡುವಿನ ವೇಳೆ ಫೇಸ್ಬುಕ್ ನೋಡಿ ಸಮಯ ಕಳೆಯುತ್ತಾರೆ. ಶಿರಸಿ ತೋಟಗಾರಿಕಾ ಮಹಾ ವಿದ್ಯಾಲಯದಲ್ಲಿ ಅವರು ಕ್ಷೇತ್ರ ಸಹಾಯಕರಾಗಿ ಕೆಲಸ ಮಾಡುತ್ತಾರೆ. ಮಂಜಪ್ಪ ಪಿ ಅವರಿಗೆ ಷೇರು ಮಾರುಕಟ್ಟೆ ಬಗ್ಗೆ ಅಪಾರ ಆಸಕ್ತಿ. ಆದರೆ, ಆ ಬಗ್ಗೆ ಅವರಿಗೆ ಅಧ್ಯಯನ ಇಲ್ಲ.
ಹೀಗಿರುವಾಗ ಫೇಸ್ಬುಕ್ ಜಾಹೀರಾತು ನೋಡಿದ ಅವರು ಅಲ್ಲಿ ಬರುವ `ಆರ್ಥಿಕ ಅಜ್ಞಾನಿ’ಗಳ ನೆರವುಪಡೆದು ಹಣ ಹೂಡಿಕೆಗೆ ನಿರ್ಧರಿಸಿದರು. ಅದರ ಪ್ರಕಾರ ಅವರು ಹೇಳಿದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರು. BOB Global Capital ಎಂಬ ಮೊಬೈಲ್ ಆಫ್ ಡೌನ್ಲೋಡ್ ಮಾಡಿಕೊಂಡರು. ಅಲ್ಲಿನವರು ಹೇಳಿದ ಮಾತು ಕೇಳಿ C2017BOB securities Capital Growth Club ಎಂಬ ವಾಟ್ಸಪ್ ಗುಂಪಿಗೆ ಸೇರಿದರು. ಮೊದಲು 5 ಸಾವಿರ ರೂಪಾಯಿ ಹೂಡಿಕೆ ಮಾಡಿದರು. ಅದಾದ ನಂತರ ಹಂತ ಹಂತವಾಗಿ 33 ಸಾವಿರ ರೂಪಾಯಿಯನ್ನು ಷೇರು ಮಾರುಕಟ್ಟೆಗಾಗಿ ವಿನಿಯೋಗಿಸಿದರು.
ಆದರೆ, ಅವರು ವಿನಿಯೋಗಿಸಿದ ಹಣ ಷೇರು ಮಾರುಕಟ್ಟೆಗೆ ಹೋಗದೇ ವಂಚಕರ ಪಾಲಾಗುತ್ತಿತ್ತು. ಜನವರಿ 19ರಂದು 1.20 ಲಕ್ಷ ರೂ ಪಾವತಿಸುವಂತೆ ಅವರಿಗೆ ಸೂಚನೆ ಬಂದ ನಂತರ ಷೇರು ಮಾರುಕಟ್ಟೆ ಗುಂಗಿನಿAದ ಹೊರಬಂದರು. ತಮಗಾದ ಮೋಸದ ಬಗ್ಗೆ ಅರಿತು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು.