ಶಿವರಾತ್ರಿ ಸಮೀಪಿಸುತ್ತಿದ್ದಂತೆ ಪರಶಿವನ ಕ್ಷೇತ್ರದಲ್ಲಿ ಜಾತ್ರಾ ಸಡಗರ ಮನೆ ಮಾಡಿದೆ. ಪ್ರಸಿದ್ಧ ಶಿವಕ್ಷೇತ್ರ ಯಾಣದಲ್ಲಿಯೂ ಶಿವರಾತ್ರಿ ಆಚರಣೆಗೆ ಬರದ ಸಿದ್ಧತೆ ನಡೆಯುತ್ತಿದೆ.
ದಟ್ಟ ಅರಣ್ಯದಲ್ಲಿನ ಬೃಹತ್ ಕಲ್ಪಂಡೆ ನಡುವೆ ನೆಲೆಸಿರುವ ಶಿವ ಸನ್ನಿಧಿ ಅನೇಕರ ಪಾಲಿಗೆ ನೆಚ್ಚಿನ ತಾಣ. ಯಾಣದ ಶ್ರೀ ಭೈರವೇಶ್ವರ ದೇವಸ್ಥಾಕ್ಕೆ ಕಡಿದಾದ ಗುಡ್ಡದ ರಸ್ತೆ ಏರಿ ಹೋಗುವುದು ಅನಿವಾರ್ಯ. ಅದಾಗಿಯೂ ಈಚೆಗೆ ಯಾಣಕ್ಕೆ ಬರುವ ಪ್ರವಾಸಿಗರ ಸಂಖ್ಯೆ ದುಪ್ಪಟ್ಟಾಗಿದ್ದು, ಇದಕ್ಕೆ ಕಡುಗಪ್ಪಿನ ಭೈರವೇಶ್ವರ ಹಾಗೂ ಮೋಹಿನಿ ಶಿಖರದ ಪೌರಾಣಿಕ ಹಿನ್ನಲೆ ಮುಖ್ಯ ಕಾರಣ.
ಇನ್ನೂ ಯಾಣಕ್ಕೆ ತೆರಳುವ ಎಲ್ಲಾ ರಸ್ತೆ ಮಾರ್ಗಗಳು ಬಹುತೇಕ ಚನ್ನಾಗಿವೆ. ಯಾಣದ ಸಮೀಪದವರೆಗೂ ವಾಹನಗಳು ಓಡಾಡುತ್ತವೆ. ಶಿರಸಿ-ಅಂಕೋಲಾ-ಕುಮಟಾ ಭಾಗದಿಂದಲೂ ಅನೇಕರು ಯಾಣಕ್ಕೆ ಭೇಟಿ ನೀಡುತ್ತಾರೆ. ಹೀಗಾಗಿ ಫೆ 26ರ ಶಿವರಾತ್ರಿ ಪೂಜೆಗೆ ಬರುವ ಭಕ್ತರಿಗೆ ಅನುಕೂಲವಾಗುವಂತೆ ಯಾಣದಲ್ಲಿ ಅಚ್ಚುಕಟ್ಟಾದ ವ್ಯವಸ್ಥೆ ನಿರ್ಮಿಸಲಾಗುತ್ತಿದೆ.
ಶಿವರಾತ್ರಿ ಅಂಗವಾಗಿ ಫೆ 24ರಿಂದಲೇ ಯಾಣದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ನಿತ್ಯ ಸಾವಿರಾರು ಭಕ್ತರು ಆಗಮಿಸಲಿದ್ದಾರೆ. ಶಿವರಾತ್ರಿಯ ದಿನ ಬೆಳಗ್ಗೆ 8ಗಂಟೆಯಿoದ ಸಂಜೆ 7.30ರವರೆಗೂ ಭಕ್ತರಿಗೆ ಯಾಣದಲ್ಲಿ ಪೂಜೆಗೆ ಅವಕಾಶ ನೀಡಲಾಗಿದೆ. ಆ ದಿನ ಎಷ್ಟೇ ಪ್ರಮಾಣದಲ್ಲಿ ಭಕ್ತರು ಬಂದರೂ ಶಿಖರದ ಗುಹೆಯಲ್ಲಿ ನೆಲೆಸಿರುವ ಭೈರವೇಶ್ವರ ದೇವರಿಗೆ ಪೂಜೆ ಸಲ್ಲಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಸಿದ್ಧತೆ ಮಾಡಿಕೊಂಡಿದೆ.
ಇನ್ನೂ ಯಾಣದಲ್ಲಿ ಅಪಾರ ಪ್ರಮಾಣದಲ್ಲಿ ಜೇನುಗೂಡು ಕಟ್ಟಿದ್ದು, ಈಚೆಗೆ ಪ್ರವಾಸಿಗರ ಮೇಲೆ ದಾಳಿಯೂ ನಡೆದಿದೆ. ಹೀಗಾಗಿ ಭಕ್ತರು ಈ ಬಗ್ಗೆ ಎಚ್ಚರವಹಿಸುವುದು ಒಳಿತು ಎಂದು ದೇವಾಲಯ ಸಮಿತಿಯವರು ಮನವಿ ಮಾಡಿದ್ದಾರೆ.