ಕುಮಟಾ: ಅಂತರವಳ್ಳಿ ಕುಡ್ಲೆಯ ಹುಲಿಯಾ ಗೌಡ ಸೈಬರ್ ವಂಚನೆಗೆ ಒಳಗಾಗಿ 57 ಸಾವಿರ ರೂ ಹಣ ಕಳೆದುಕೊಂಡಿದ್ದು, ಪೊಲೀಸರು ಆ ಹಣವನ್ನು ಮರಳಿ ಅವರ ಖಾತೆಗೆ ಜಮಾ ಮಾಡಿಸಿದ್ದಾರೆ!
ಹುಲಿಯಾ ಗೌಡ ಅವರ ಆಧಾರ್ ಬಯೋಮೆಟ್ರಿಕ್’ನ್ನು ದುರುಪಯೋಗಪಡಿಸಿಕೊಂಡಿದ್ದ ವಂಚಕರು ಉಪಾಯವಾಗಿ ಅವರ ಖಾತೆಯಲ್ಲಿದ್ದ ಹಣವನ್ನು ಎಗರಿಸಿದ್ದರು. ಹಣ ಕಣ್ಮರೆಯಾಗಿರುವುದು ಗೊತ್ತಾದ ಕೂಡಲೇ ಹುಲಿಯಾ ಗೌಡ ಅವರು 1930 ಸಹಾಯವಾಣಿಗೆ ಕರೆ ಮಾಡಿದ್ದರು. ಅವರ ದೂರು ಕುಮಟಾ ಪೊಲೀಸರಿಗೆ ವರ್ಗವಾಗಿದ್ದು, ತಕ್ಷಣ ಜಾಗೃತರಾದ ಪೊಲೀಸರು ತಮ್ಮ ಪ್ರಭಾವ ಬೀರಿ ವಂಚಕರ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿದರು. ಆ ಮೂಲಕ ವಂಚಕರು ಖಾತೆಗೆ ಜಮಾ ಆದ ಹಣವನ್ನು ಪಡೆಯಲು ಸಾಧ್ಯವಾಗದ ರೀತಿ ತಡೆದರು.
ಈ ಎಲ್ಲಾ ಪ್ರಕ್ರಿಯೆ ಮುಗಿದ ಎರಡು ದಿನದ ಒಳಗೆ ಹುಲಿಯಾ ಗೌಡ ಅವರು ಕಳೆದುಕೊಂಡ ಹಣ ಅವರ ಬ್ಯಾಂಕ್ ಖಾತೆಗೆ ಜಮಾ ಆಗಿದೆ. ಇದರಿಂದ ಸಂತೋಷಗೊoಡ ಅವರು ಪೊಲೀಸರ ನಡೆಯನ್ನು ಶ್ಲಾಘಿಸಿದರು. ಗುರುವಾರ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ಕುಮಟಾಗೆ ಭೇಟಿ ನೀಡಿರುವುದನ್ನು ಅರಿತ ಹುಲಿಯಾ ಗೌಡ ಅವರ ಪುತ್ರ ಕಿರಣ್ ಸಹ ಪೊಲೀಸರ ಸಹಾಯವನ್ನು ಮನಸಾರೆ ಕೊಂಡಾಡಿದರು. ಬಡ ಕುಟುಂಬಕ್ಕೆ ನೆರವು ನೀಡಿದ ಪೊಲೀಸ್ ಸಿಬ್ಬಂದಿಯನ್ನು ಎಸ್ಪಿ ಎಂ ನಾರಾಯಣ ಪ್ರಶಂಶಿಸಿದರು.
ನೆನಪಿಡಿ: ಸೈಬರ್ ವಂಚನೆ ಆದಲ್ಲಿ ತಕ್ಷಣ 1930ಗೆ ಕರೆ ಮಾಡಿ..