ಕಾರವಾರ: 3 ಕೋಟಿ ರೂ ಲಂಚದ ಆಸೆಗೆ ಆರೋಪಿ ಸುಲೆಮಾನ್ ಮೊಹಮ್ಮದ್ ಖಾನ್ ಗೋವಾದ ಜೈಲಿನಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿರುವ ಉತ್ತರ ಕನ್ನಡ ಮೂಲದ ಗೋವಾ ಪೊಲೀಸ್ ಸಿಬ್ಬಂದಿ ಅಮೀತ್ ನಾಯ್ಕ ತಮಗಿದ್ದ ಪೊಲೀಸ್ ಕೆಲಸವನ್ನು ಸಹ ಕಳೆದುಕೊಂಡಿದ್ದಾರೆ!
ಅಮೀತ ನಾಯ್ಕ ಅವರ ತಂದೆ – ತಾಯಿ ಸಹ ಗೋವಾದಲ್ಲಿಯೇ ವಾಸವಾಗಿದ್ದಾರೆ. ಈ ಹಿನ್ನಲೆ ಅಲ್ಲಿಯೇ ಓದಿ ಬೆಳೆದ ಅಮೀತ ನಾಯ್ಕ 2013ರಲ್ಲಿ ಗೋವಾದ ಪೊಲೀಸ್ ಇಲಾಖೆ ಸೇರಿದ್ದರು. ಶುರುವಿನಲ್ಲಿ ಅತ್ಯಂತ ಕಟ್ಟುನಿಟ್ಟಾಗಿ ಕೆಲಸ ಮಾಡಿದ್ದ ಅವರು ಕ್ರಮೇಣ ಭ್ರಷ್ಟಾಚಾರದ ಕಡೆ ವಾಲಿದರು. ಗೋವಾ ಪಣಜಿಯ ಕುಖ್ಯಾತ ಕ್ರಿಮಿನಲ್ ಸುಲೆಮಾನ್ ಮೊಹಮ್ಮದ್ ಖಾನ್’ನನ್ನು ನಂಬಿ ಅಮೀತ ನಾಯ್ಕ ಜೈಲು ಪಾಲಾಗಿದ್ದಾರೆ.
ಸುಲೆಮಾನ್ ಮೊಹಮ್ಮದ್ ಖಾನ್ ಜೈಲಿನಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದ ಅಮೀತ ನಾಯ್ಕ, ನಂತರ ತಮ್ಮದೇ ಬೈಕಿನಲ್ಲಿ ಆತನನ್ನು ಹುಬ್ಬಳ್ಳಿಗೆ ಕರೆತಂದು ಬಿಟ್ಟಿದ್ದರು. ಈ ಕೆಲಸ ಮಾಡುವುದಕ್ಕಾಗಿ 3 ಕೋಟಿ ರೂ ಲಂಚಕ್ಕೆ ಕೈ ಒಡ್ಡಿದ್ದರು. ಆ ಹಣ ಪಡೆದು ಪೊಲೀಸ್ ಕೆಲಸಕ್ಕೂ ರಾಜೀನಾಮೆ ನೀಡುವ ಸಿದ್ಧತೆಯಲ್ಲಿ ಅಮೀತ್ ನಾಯ್ಕ ಇದ್ದರು. ಕೈಗೆ ಬಂದ ಕಾಸಿನಲ್ಲಿ ಪುಟ್ಟದೊಂದು ಜಾಗ ಖರೀದಿಸಿ ಅಲ್ಲಿ ನಿವೃತ್ತಿ ಜೀವನ ನಡೆಸುವ ಬಗ್ಗೆ ಚಿಂತಿಸಿದ್ದರು. ಆದರೆ, ಹುಬ್ಬಳ್ಳಿಗೆ ಬಂದ ತಕ್ಷಣ ಸುಲೆಮಾನ್ ಮೊಹಮ್ಮದ್ ಖಾನ್ ಸಹ ಅಮೀತ ನಾಯ್ಕರಿಂದ ತಪ್ಪಿಸಿಕೊಂಡಿದ್ದು, ಆತನಿಗೆ ನೆರವು ನೀಡಿದ ಕಾರಣ ಅಮೀತ ನಾಯ್ಕ ಸಿಕ್ಕಿ ಬಿದ್ದರು!
ಕಳ್ಳ ಪೊಲೀಸನಿಂದ ಆತ್ಮಹತ್ಯೆ ಪ್ರಯತ್ನ!
`ಕೌಟುಂಬಿಕ ಸಮಸ್ಯೆಯ ಕಾರಣದಿಂದ ಈ ಕೆಲಸ ಒಪ್ಪಿಕೊಂಡೆ’ ಎಂದು ಅಮೀತ ನಾಯ್ಕ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ. `3 ಕೋಟಿ ಹಣ ಪಡೆದು ಗೋವಾ ತೊರೆಯುವ ಬಗ್ಗೆ ನಿರ್ಧರಿಸಿದ್ದೆ’ ಎಂದು ಬಾಯ್ಬಿಟ್ಟಿದ್ದಾರೆ. ಈ ಎಲ್ಲದರ ನಡುವೆ ಅಮೀತ ನಾಯ್ಕ ಭಾನುವಾರ ಜೈಲಿನ ಶೌಚಾಲಯದಲ್ಲಿದ್ದ ಹಾರ್ಪಿಕ್ ಸೇವಿಸಿ ಆತ್ಮಹತ್ಯೆಗೂ ಯತ್ನಿಸಿದ್ದಾರೆ. ತಕ್ಷಣ ಜೈಲು ಸಿಬ್ಬಂದಿ ಅಮೀತರನ್ನು ವೈದ್ಯಕೀಯ ಕಾಲೇಜಿಗೆ ದಾಖಲು ಮಾಡಿದ್ದಾರೆ. ಪ್ರಸ್ತುತ ಅಮೀತ ನಾಯ್ಕ ಚೇತರಿಸಿಕೊಳ್ಳುತ್ತಿದ್ದು, ಸಂಪೂರ್ಣ ಗುಣಮುಖರಾದ ನಂತರ ವಿಚಾರಣೆ ಮುಂದುವರೆಯಲಿದೆ.
ಇನ್ನೂ ಸಿಗದ ದೊಡ್ಡ ಕಳ್ಳ!
ಅಮೀತ್ ನಾಯ್ಕ ನೆರವಿನಿಂದ ತಪ್ಪಿಸಿಕೊಂಡಿರುವ ಸುಲೆಮಾನ್ ಮೊಹಮ್ಮದ್ ಖಾನ್’ಗಾಗಿ ಹುಡುಕಾಟ ಮುಂದುವರೆದಿದೆ. ಈವರೆಗೂ ಆತ ಸಿಕ್ಕಿಲ್ಲ. ಸಿದ್ಧಿಕ್ ಎಂದು ಕರೆಯಲ್ಪಡುವ ಸುಲೆಮಾನ್ ಮೊಹಮ್ಮದ್ ಖಾನ್ ಹುಡುಕಾಟಕ್ಕೆ ಹಲವು ತಂಡಗಳನ್ನು ರಚಿಸಲಾಗಿದೆ. ದೇಶದ ನಾನಾ ಭಾಗಗಳಲ್ಲಿ ಗೋವಾ ಪೊಲೀಸರು ಆತನ ಶೋಧ ನಡೆಸಿದ್ದಾರೆ.