ಮೀನುಗಾರಿಕೆಗಾಗಿ ಆಳ ಸಮುದ್ರಕ್ಕೆ ತೆರಳಿದ್ದ ಕಾರವಾರದ ಮಾಜಾಳಿ ಬಳಿಯ ಮಹೇಶ ಸಾಳಗಾಂವ್ಕರ್ ಅವರಿಗೆ ನೆರೆ ಜಿಲ್ಲೆ ಮೀನುಗಾರರು ಆತಂಕ ಉಂಟು ಮಾಡಿದ್ದಾರೆ. ಅರಬ್ಬಿ ಸಮುದ್ರದಲ್ಲಿ ಎಂಟುವರೆ ತಾಸು ಈಜುವ ಮೂಲಕ ಅವರು ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ!
ಸೋಮವಾರ ಸಂಜೆ ಮಹೇಶ ಸಾಳಗಾಂವ್ಕರ್ ತಮ್ಮ ಪಾತೆ ದೋಣಿ ಮೂಲಕ ಮೀನುಗಾರಿಕೆಗೆ ತೆರಳಿದ್ದರು. ಸಮುದ್ರದಲ್ಲಿದ್ದ ಮಂಗಳೂರಿನ ಯಾಂತ್ರಿಕೃತ ದೋಣಿಯವರು ಬೀಸಿದ ಬಲೆಗೆ ಮಹೇಶ ಅವರ ದೋಣಿ ಸಿಲುಕಿಕೊಂಡಿತು. ದಮ್ಮಯ್ಯ ಎಂದರೂ ದೊಡ್ಡ ಬೋಟಿನವರು ಸಣ್ಣ ದೋಣಿಯನ್ನು ಬಿಟ್ಟುಕೊಡಲಿಲ್ಲ. ಆ ದೋಣಿಯ ಜೊತೆ ಮಹೇಶ ಅವರನ್ನು ಹಗ್ಗದಿಂದ ಕಟ್ಟಿ ಎಳೆದೊಯ್ಯುವ ಪ್ರಯತ್ನ ನಡೆಸಿದರು. ಆ ಸಂಘರ್ಷದಲ್ಲಿ ಮಹೇಶ ಅವರು ಬೆದರಿದ್ದು, ಕಂಗಾಲಾದ ಅವರು ತಪ್ಪಿಸಿಕೊಳ್ಳುವುದಕ್ಕಾಗಿ ಸಮುದ್ರಕ್ಕೆ ಹಾರಿದರು.
ಇದಕ್ಕೂ ಮುನ್ನ ಅವರು ತಮ್ಮ ಪತ್ನಿಗೆ ಫೋನ್ ಮಾಡಿದ್ದರು. `ತಾನು ಅಪಾಯಕ್ಕೆ ಸಿಲುಕಿದ್ದೇನೆ’ ಎಂಬ ಸಂದೇಶ ರವಾನಿಸಿದ್ದರು. ಹೀಗಾಗಿ ಪೊಲೀಸರು ಮಹೇಶ ಅವರ ಹುಡುಕಾಟ ನಡೆಸಿದರು. ಮಹೇಶ ಅವರನ್ನು ಬೆದರಿಸಿದ ದೊಡ್ಡ ದೋಣಿಯವರನ್ನು ಸಹ ವಿಚಾರಣೆಗೆ ಒಳಪಡಿಸಿದರು. ಊರಿನವರೆಲ್ಲ ಸೇರಿ ಆಳ ಸಮುದ್ರದಲ್ಲಿ ಹುಡುಕಾಟ ನಡೆಸಿದರು. ರಾತ್ರಿ 11 ಗಂಟೆಯವರೆಗೂ ಪೊಲೀಸರ ಜೊತೆ ಊರಿನವರು ಹುಡುಕಿದರು. ನೀರಿನಲ್ಲಿ ಬಿದ್ದ ಮಹೇಶ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಅವರ ಲೊಕೇಶನ್ ಸಹ ಕಂಡು ಹಿಡಿಯಲು ಆಗಲಿಲ್ಲ. ಎಷ್ಟು ಹುಡುಕಿದರೂ ಮಹೇಶ ಅವರ ಸುಳಿವು ಸಿಕ್ಕಿಲ್ಲ.
45 ವರ್ಷದ ಮಹೇಶ ಸಾಳಗಾಂವ್ಕರ್ ಅವರಿಗೆ ಮೀನು ಹಿಡಿಯುವುದು ಹಾಗೂ ಈಜುವುದು ಬಿಟ್ಟು ಬೇರೆನೂ ಬರುತ್ತಿರಲಿಲ್ಲ. ಹೀಗಾಗಿ ಸಮುದ್ರದಲ್ಲಿ ಅವರು ನಿರಂತರವಾಗಿ ಈಜಲು ಶುರು ಮಾಡಿದ್ದರು. ತಮ್ಮಲ್ಲಿದ್ದ ಚಾಕುವಿನಿಂದ ದೋಣಿ ಸಮತೋಲನ ಕಾಪಾಡಲು ಬಳಸುವ ಉಲಾಂಡಿ ದಾರ ತುಂಡರಿಸಿದ್ದರು. ಅದರ ಮೂಲಕ ಮರದ ಹಲಿಗೆಯೊಂದನ್ನು ಹಿಡಿದುಕೊಂಡು ಕೆಲ ಕಾಲ ವಿರಮಿಸಿದರು. ಮತ್ತೆ ಈಜುತ್ತ ಈಜುತ್ತ ದಡ ಸೇರುವ ಪ್ರಯತ್ನ ಮಾಡುತ್ತಿದ್ದರು.
ಎಂಟುವರೆ ತಾಸು ಈಜಿದ ನಂತರ ಅವರಿಗೆ ದಡ ಕಾಣಿಸಿತು. ಮಂಗಳವಾರ ಬೆಳಗ್ಗೆ ಅವರು ಗೋವಾದ ಕಾಣಕೋಣ ಕಡಲತೀರಕ್ಕೆ ಬಂದು ತಲುಪಿದರು. ಅಲ್ಲಿನ ಜನ ಮಹೇಶ ಅವರಿಗೆ ನೆರವಾದರು. ಈ ವೇಳೆಗಾಗಲೇ ಊರಿನವರಿಗೂ ಸುದ್ದಿ ಮುಟ್ಟಿತು. ಅವರೆಲ್ಲರೂ ಸೇರಿ ಮಹೇಶ ಅವರನ್ನು ಕಾರವಾರಕ್ಕೆ ಕರೆ ತಂದರು. ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಮುದ್ರದಲ್ಲಿ ಸತತವಾಗಿ ಈಜಿ ದಡ ಸೇರಿ ಆಯಾಸಗೊಂಡಿದ್ದ ಮಹೇಶ ಅವರು ಇದೀಗ ಚೇತರಿಸಿಕೊಂಡಿದ್ದಾರೆ.