ಶಿರಸಿ: ಕ್ರೆo ಬ್ರಾಂಚ್ ಅಧಿಕಾರಿ ಹೆಸರಿನಲ್ಲಿ ನಾಗರಾಜ ಪಟಗಾರ ಅವರಿಗೆ ಫೋನ್ ಮಾಡಿದ ವ್ಯಕ್ತಿಯೊಬ್ಬ 30 ಸಾವಿರ ರೂಪಾಯಿ ಬೇಡಿದ್ದು, ಈ ವೇಳೆ ನಾಗರಾಜ ಪಟಗಾರ ಅವರು 10 ಸಾವಿರ ರೂ ನೀಡಿದ್ದಾರೆ. ಅದಾದ ನಂತರ ಆತ ನಕಲಿ ಅಧಿಕಾರಿ ಎಂದು ಅರಿವಾಗಿ ಇದೀಗ ಪೊಲೀಸ್ ದೂರು ನೀಡಿದ್ದಾರೆ.
ಶಿರಸಿ ದೇವಿಕೆರೆಯ ನಾಗರಾಜ ಪಟಗಾರ ರಿಕ್ಷಾ ಓಡಿಸಿ ಬದುಕು ಕಟ್ಟಿಕೊಂಡಿದ್ದಾರೆ. ಅಕ್ಟೊಬರ್ 5ರಂದು ಅವರಿಗೆ ಅಪರಿಚಿತ ಫೋನ್ ಕರೆ ಬಂದಿದ್ದು, ಅದನ್ನು ಸ್ವೀಕರಿಸಿದ್ದಾರೆ. ಆ ಕಡೆಯಿಂದ ಮಾತನಾಡಿದ ವ್ಯಕ್ತಿ ತನನ್ನನ್ನು ಕ್ರೆo ಬ್ರಾಂಚ್ ಅಧಿಕಾರಿ’ ಎಂದು ಪರಿಚಯಿಸಿಕೊಂಡಿದ್ದಾನೆ. ಇದಾದ ಮೇಲೆ `ನಿಮ್ಮ ಮಗಳು ತೇಜಶ್ರೀ (ಹೆಸರು ಬದಲಿಸಿದೆ) ಪ್ರಕರಣವೊಂದರಲ್ಲಿ ಸಿಕ್ಕಿಬಿದ್ದಿದ್ದಾರೆ. ಆಕೆ ತುಂಬಾ ಒಳ್ಳೆಯವಳಾಗಿದ್ದು, ಈ ಪ್ರಕರಣದಿಂದ ಆಕೆಯ ಹೆಸರು ಕೈ ಬಿಡಲು 30 ಸಾವಿರ ಕೊಡಬೇಕು’ ಎಂದು ಫೋನ್ ಮಾಡಿದ ಅಪರಿಚಿತ ಹೇಳಿದ್ದಾನೆ.
ಆತ ಹಿಂದಿಯಲ್ಲಿ ಮಾತನಾಡಿದರೂ ನಾಗರಾಜ ಪಟಗಾರ ಅವರಿಗೆ ಅನುಮಾನ ಬಂದಿಲ್ಲ. ಮಗಳ ಮೇಲಿನ ಮಮತೆಯಿಂದಾಗಿ ಅವರು ಕಾಸು ಕೊಡಲು ಒಪ್ಪಿಕೊಂಡಿದ್ದಾರೆ. ಕಾಡಿಬೇಡಿದ ನಂತರ 30 ಸಾವಿರದ ಬದಲು 10 ಸಾವಿರ ರೂ ಹಣ ಕೊಡುವಂತೆ ಆತ ತಾಕೀತು ಮಾಡಿದ್ದಾನೆ. ಇದಕ್ಕೆ ಒಪ್ಪಿದ ನಾಗರಾಜ ಪಟಗಾರ ಅವರು ಆತನ ಮೊಬೈಲಿಗೆ ಫೋನ್ ಪೇ ಮಾಡಿದ್ದಾರೆ.
ಅದಾದ ನಂತರ ತಾನು ಮೋಸ ಹೋಗಿರುವುದನ್ನು ಅರಿತ ನಾಗರಾಜ ಪಟಗಾರ ಅವರು `ತನಗೆ ನ್ಯಾಯ ಕೊಡಿಸಿ’ ಎಂದು ಪೊಲೀಸರ ಮೊರೆ ಹೋಗಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳ ಅಧಿಕಾರಿಯ ಹುಡುಕಾಟ ನಡೆಸಿದ್ದಾರೆ.