`ಕೋರ್ಟು-ಕಚೇರಿ ಅಲೆದಾಟ ನಡೆಸಿ ಸಮಯ ಹಾಗೂ ಹಣ ವ್ಯಯಿಸುವ ಬದಲು ರಾಜಿ ಸೂತ್ರ ಅನುಸರಿಸಿ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ದಿವ್ಯಶ್ರೀ ಸಿ ಎಂ ಹೇಳಿದ್ದಾರೆ.
ಇದರೊಂದಿಗೆ ವಿವಿಧ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವ ಸಣ್ಣ-ಪುಟ್ಟ ಪ್ರಕರಣಗಳನ್ನು ರಾಜಿ ಮೂಲಕ ಬಗೆಹರಿಸಲು ಹಿರಿಯ ಸಿವಿಲ್ ನ್ಯಾಯಾಧೀಶೆ ದಿವ್ಯಶ್ರೀ ಸಿ ಎಂ ಆಸಕ್ತಿವಹಿಸಿದ್ದಾರೆ. ಇದಕ್ಕಾಗಿ ಮಾರ್ಚ 8ರಂದು ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ನ್ಯಾಯಾಲಯದಲ್ಲಿಯೂ `ಲೋಕ ಅದಾಲತ್’ ನಡೆಸಲು ಅವರು ಸಿದ್ಧತೆ ನಡೆಸಿಕೊಂಡಿದ್ದಾರೆ.
`ಈ ಲೋಕ ಅದಾಲತ್ನಲ್ಲಿ 7500 ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ’ ಎಂದು ಕಾರವಾರದಲ್ಲಿ ದಿವ್ಯಶ್ರೀ ಸಿ ಎಂ ಸುದ್ದಿಗಾರರಿಗೆ ಹೇಳಿದರು. `ಜಿಲ್ಲೆಯ ವಿವಿಧ ಹಂತದ ನ್ಯಾಯಾಲಯದಲ್ಲಿ ಒಟ್ಟು 38,072 ಪ್ರಕರಣಗಳು ಬಾಕಿ ಇದ್ದು, ಈಗಾಗಲೇ ಇತ್ಯರ್ಥಪಡಿಸಲು ಸಿದ್ದವಿರುವ 907 ಪ್ರಕರಣಗಳಿವೆ. ಕಳೆದ ಬಾರಿ ನಡೆದ ಲೋಕ ಅದಾಲತ್ನಲ್ಲಿ 5,495 ಪ್ರಕರಣಗಳನ್ನು ರಾಜಿ ಮೂಲಕ ಬಗೆಹರಿಸಲಾಗಿದೆ’ ಎಂದವರು ತಿಳಿಸಿದರು.
`ಬ್ಯಾಂಕ್ ಪ್ರಕರಣ, ಸಣ್ಣ-ಪುಟ್ಟ ಅಪರಾಧ ಪ್ರಕರಣ, ವಿದ್ಯುತ್-ಆಸ್ತಿ ಕರ, ನೀರಿನ ಬಿಲ್ಲು, ಕಾರ್ಮಿಕ ವಿವಾದ, ಭೂ ಸ್ವಾಧೀನ ಪ್ರಕರಣಗಳನ್ನು ಇಲ್ಲಿ ರಾಜಿ ಮೂಲಕ ಬಗೆಹರಿಸಿಕೊಳ್ಳಬಹುದು. ವೈವಾಹಿಕ ಹಾಗೂ ಕೌಟುಂಬಿಕ ಪ್ರಕರಣಗಳು, ಚೆಕ್ ಅಮಾನ್ಯದ ಪ್ರಕರಣಗಳು, ಇತರೆ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ರಾಜಿ ಮೂಲಕ ಬಗೆಹರಿಸಲು ಸಾಧ್ಯವಿದೆ’ ಎಂದವರು ವಿವರಿಸಿದರು.