ಹೊನ್ನಾವರ: ಅಪ್ಸರಕೊಂಡದ ದುರ್ಗಾಂಬಾ ಹೊಟೇಲ್ ಎದುರು ನಡೆದ ಅಪಘಾತದಲ್ಲಿ ಗಣಪತಿ ನಾಯ್ಕ ಎಂಬಾತರು ಸಾವನಪ್ಪಿದ್ದಾರೆ.
ಡಿ 13ರ ಮಧ್ಯಾಹ್ನ ಗಣಪತಿ ರಾಮಚಂದ್ರ ನಾಯ್ಕ ಅವರು ಹೊನ್ನಾವರದಿಂದ ಮಂಕಿ ಕಡೆ ಹೊರಟಿದ್ದರು. ಈ ವೇಳೆ ಸಂಚಾರಿ ನಿಯಮ ಉಲ್ಲಂಘಿಸಿ ಅಡ್ಡಾದಿಡ್ಡಿ ಸ್ಕೂಟಿ ಓಡಿಸಿಕೊಂಡು ಬಂದ ಅಪರಿಚಿತ ಹೆದ್ದಾರಿ ಡಿವೈಡರ್ ಸಂದಿಯಲ್ಲಿ ತನ್ನ ವಾಹನ ನುಸುಳಿಸಿದ್ದ. ಆತ ಏಕಾಏಕಿ ಹೊಟೇಲ್ ಕಡೆ ಸ್ಕೂಟಿ ತಿರುಗಿಸಿದ್ದು, ಆ ಸ್ಕೂಟಿ ಗಣಪತಿ ನಾಯ್ಕ ಅವರ ಬೈಕಿಗೆ ಗುದ್ದಿತು.
ಗಣಪತಿ ನಾಯ್ಕ ಅವರು ಬೈಕಿನಿಂದ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದರು. ರಸ್ತೆಯಲ್ಲಿ ರಕ್ತ ಸುರಿಯುತ್ತಿರುವುದನ್ನು ನೋಡಿದ ಸ್ಕೂಟಿ ಸವಾರ ಅಲ್ಲಿಂದ ಪರಾರಿಯಾಗಿದ್ದ. ನಂತರ ಸ್ಥಳೀಯರು ಆಂಬುಲೆನ್ಸ್’ಗೆ ಫೋನ್ ಮಾಡಿ ಗಣಪತಿ ನಾಯ್ಕರನ್ನು ಹೊನ್ನಾವರದ ಆಸ್ಪತ್ರೆಗೆ ದಾಖಲಿಸಿದ್ದರು.
ಹೆಚ್ಚಿನ ಚಿಕಿತ್ಸೆಗಾಗಿ ಗಣಪತಿ ನಾಯ್ಕರನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಡಿ 14ರ ಸಂಜೆ ಅವರು ಸಾವನಪ್ಪಿರುವ ಬಗ್ಗೆ ಉಡುಪಿ ಪೊಲೀಸರು ಮಂಕಿ ಪೊಲೀಸ್ ಠಾಣೆಗೆ ಇ-ಮೇಲ್ ಮಾಡಿದ್ದಾರೆ. `ಸಾಕಷ್ಟು ಪ್ರಯತ್ನ ನಡೆಸಿದರೂ ಗಣಪತಿ ನಾಯ್ಕರನ್ನು ಬದುಕಿಸಿಕೊಳ್ಳಲಾಗಲಿಲ್ಲ’ ಎಂದು ಆಸ್ಪತ್ರೆಯವರು ಹೇಳಿದ್ದಾರೆ.
ಅಪಘಾತದ ಬಗ್ಗೆ ಮಂಕಿಯ ಚಾಲಕ ಶ್ರೀಕಾಂತ ನಾಯ್ಕ ಪೊಲೀಸರಿಗೆ ವಿವರಿಸಿ ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಈ ಅಪಘಾತಕ್ಕೆ ಕಾರಣನಾದ ಅಪರಿಚಿತ ಸ್ಕೂಟಿ ಸವಾರನ ಹುಡುಕಾಟ ನಡೆಸಿದ್ದಾರೆ.
ಸಂಚಾರಿ ನಿಯಮ ಪಾಲಿಸಿ. ನೀವು ಬದುಕಿ.. ಬೇರೆಯವರನ್ನು ಬದುಕಿಸಿ!