ಆಯುಷ್ ಇಲಾಖೆಯಲ್ಲಿನ ಅಕ್ರಮ ಬಯಲು ಮಾಡುವುದಾಗಿ ಹೇಳಿಕೊಂಡು ಓಡಾಡಿಕೊಂಡಿದ್ದ ಅದೇ ಇಲಾಖೆಯ ಗುತ್ತಿಗೆ ವೈದ್ಯ ಸಂಗಮೇಶ ಪೆರಂಡಿ ಅಮಾನತಾಗಿದ್ದಾರೆ. ಕರ್ತವ್ಯ ಲೋಪದ ಕಾರಣ ನೀಡಿ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಸಂಗಮೇಶ ಪೆರಂಡಿ ಅವರನ್ನು ಅಮಾನತು ಮಾಡಿದ್ದಾರೆ.
ಕೇಂದ್ರ ಪುರಸ್ಕೃತ ಯೋಜನೆ ಅಡಿ ಸಂಗಮೇಶ ಪೆರಂಡಿ ಕಾರವಾರದ ಸರ್ಕಾರಿ ಆಯುಷ್ ಆಸ್ಪತ್ರೆಗೆ ನೇಮಕವಾಗಿದ್ದರು. ಗುತ್ತಿಗೆ ಆಧಾರದಲ್ಲಿ ಅವರು ಕರ್ತವ್ಯ ನಿಭಾಯಿಸುತ್ತಿದ್ದರು. ಆಯುಷ್ ಇಲಾಖೆಯಲ್ಲಿನ ಸಿಬ್ಬಂದಿ ಔಷಧಿ ಸುಡುವುದರ ಬಗ್ಗೆ ಅವರು ಮೇಲಧಿಕಾರಿಗಳಿಗೆ ದೂರು ನೀಡಿದ್ದರು. ಇದಲ್ಲದೇ, ಇಲಾಖೆಯ ಹಿರಿಯ ಅಧಿಕಾರಿಗಳ ವಿರುದ್ಧ ಸಾಕಷ್ಟು ಆರೋಪಗಳನ್ನು ಮಾಡಿದ್ದರು.
ಡಾ ಸಂಗಮೇಶ ಪೆರಂಡಿ ಮೇಲೆ ಹಲ್ಲೆಯೂ ನಡೆದಿದ್ದು, ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಮೇಲಧಿಕಾರಿಗಳ ಕುಮ್ಮಕ್ಕಿನಿಂದ ಹಲ್ಲೆ ನಡೆದ ಬಗ್ಗೆಯೂ ಅವರು ದೂರಿದ್ದರು. ಈ ಎಲ್ಲದರ ನಡುವೆ ಆಯುಷ್ ಆಸ್ಪತ್ರೆಯಲ್ಲಿದ್ದ ಔಷಧಿಗಳನ್ನು ಡಾ ಸಂಗಮೇಶ ಪೆರಂಡಿಯೇ ಅಪಹರಿಸಿದ ವಿಡಿಯೋ ಸಿಸಿ ಕ್ಯಾಮರಾದಲ್ಲಿ ದಾಖಲಾಗಿತ್ತು. ಡಾ ಸಂಗಮೇಶ ಪೆರಂಡಿ ವಿರುದ್ಧ ಆಸ್ಪತ್ರೆಯ ವೈದ್ಯಾಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.
ಆ ವರದಿ ಆಧರಿಸಿ ಬೆಂಗಳೂರು ಆಯುಷ್ ಇಲಾಖೆ ಆಯುಕ್ತರು ಡಾ ಸಂಗಮೇಶ ಪೆರಂಡಿ ಅವರನ್ನು ಅಮಾನತು ಮಾಡಲು ಶಿಫಾರಸ್ಸು ಮಾಡಿದ್ದಾರೆ. ಈ ಹಿನ್ನಲೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.