ಅಂಕೋಲಾ: 36 ವರ್ಷಗಳಿಂದ ಶಿಕ್ಷಕ ವೃತ್ತಿಯಲ್ಲಿರುವ ಮಾಲಿನಿ ನಾಯಕ ಮಕ್ಕಳೊಂದಿಗೆ ಬೆರತು ಪಾಠ ಮಾಡುತ್ತಾರೆ. ನಿತ್ಯ ಪಾಠದ ಜೊತೆ ಮಕ್ಕಳಿಗೆ ಅವರು ಜಾನಪದ ಗೀತೆಗಳನ್ನು ಕಲಿಸುತ್ತಾರೆ. ಸ್ವತಃ ಹಾಡುಗಳನ್ನು ಬರೆದು ಮಕ್ಕಳಿಂದ ಹಾಡಿಸುತ್ತಾರೆ. ನಿನ್ನೆ ಅವರು ಮಕ್ಕಳನ್ನು ಶಾಲೆಗೆ ಬರ ಮಾಡಿಕೊಂಡ ರೀತಿಯೇ ವಿಭಿನ್ನ!
ಅಂಕೋಲಾ ತಾಲೂಕಿನ ದಟ್ಟ ಕಾಡು ಪ್ರದೇಶವಾದ ಮೇಲನಗುಳಿ ಶಾಲೆಯಲ್ಲಿ ಮಾಲಿನಿ ಬೀರಣ್ಣ ನಾಯಕ ಅವರು ಶಿಕ್ಷಕಿಯಾಗಿದ್ದಾರೆ. ಕಳೆದ ಎರಡುವರೆ ವರ್ಷಗಳ ಹಿಂದೆ ಇಲ್ಲಿಗೆ ಬಂದ ಅವರು ಮುಚ್ಚುವ ಹಂತದಲ್ಲಿದ್ದ ಶಾಲೆಯನ್ನು ಉಳಿಸಿಕೊಂಡಿದ್ದಾರೆ. ಆ ಶಾಲೆಯಲ್ಲಿ 10 ಮಕ್ಕಳಿದ್ದು, ತಮ್ಮ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕವೇ ಬೇರೆ ಊರಿನ ಮಕ್ಕಳು ಈ ಶಾಲೆಗೆ ಬರುವಂತೆ ಮಾಡಿದ್ದಾರೆ. ಹೀಗಾಗಿ ಆ ಶಾಲೆಯಲ್ಲಿ ಇದೀಗ 15 ಮಕ್ಕಳು ಕಲಿಯುತ್ತಿದ್ದಾರೆ.
ಪ್ರತಿ ದಿನ ಆಟ-ಪಾಠಗಳಿಲ್ಲದೇ ಅವರು ಶಾಲೆಯಿಂದ ಮನೆಗೆ ಮರಳುವುದಿಲ್ಲ. ಸರ್ಕಾರಿ ಯೋಜನೆಗಳು, ಪೌಷ್ಠಿಕ ಆಹಾರದ ಮಹತ್ವ ಸೇರಿ ಹಲವು ವಿಷಯಗಳ ಕುರಿತು ಮಕ್ಕಳಿಗೆ ಅರಿವು ಮೂಡಿಸುತ್ತಾರೆ. ಪುಸ್ತಕದಲ್ಲಿ ಇಲ್ಲದ ಸಾಮಾನ್ಯ ಮಾಹಿತಿಯನ್ನು ಮಕ್ಕಳಿಗೆ ಪಾಠ ಮಾಡುತ್ತಾರೆ. ಈ ಕಾರಣದಿಂದಲೇ ಮೇಲನಗುಳಿ ಜೊತೆ ಅಂಕೋಲಾ ಹಾಗೂ ಹೆಬ್ಬುಡ್ಲು ಭಾಗದ ಮಕ್ಕಳು ತಮ್ಮ ನೆಂಟರ ಮನೆಯಲ್ಲಿ ಉಳಿದು ಈ ಶಾಲೆಗೆ ಬರುತ್ತಿದ್ದಾರೆ.
ಮಾಲಿನಿ ನಾಯಕ ಅವರು ಈ ಹಿಂದೆ ಅಚವೆಯ ಚನಗಾರ ಶಾಲೆಯಲ್ಲಿದ್ದರು. ಅದಕ್ಕೂ ಮುನ್ನ ಸಿದ್ದಾಪುರ ತಾಲೂಕಿನ ಹಲವು ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದರು. 56 ವರ್ಷದ ಅವರು ಶಿಕ್ಷಕರಾದ ಮೊದಲ ದಿನದಿಂದಲೂ ಅಧ್ಯಯನವಿಲ್ಲದೇ ಶಾಲೆ ಪ್ರವೇಶಿಸಿದ್ದಿಲ್ಲ.
ಶಿಕ್ಷಕಿ ಮಾಲನಿ ಅವರು ಸೋಮವಾರ ಮಕ್ಕಳನ್ನು ಶಾಲೆಗೆ ಬರಮಾಡಿಕೊಂಡ ವಿಡಿಯೋ ಇಲ್ಲಿ ನೋಡಿ..