ಅನುಮಾನಾಸ್ಪದ ಕಾರಿನಲ್ಲಿ ಕೋಟಿ ರೂ ಸಿಕ್ಕ ಪ್ರಕರಣದ ರಹಸ್ಯ ಪೊಲೀಸರ ಪಾಲಿಗೆ ಸವಾಲಾಗಿದೆ. ರಾಮನಗುಳಿ ಬಳಿ ಅನಾಥವಾಗಿದ್ದ ಕಾರಿನಲ್ಲಿ ಹಣ ಸಿಕ್ಕಿ ಐದು ದಿನ ಕಳೆದರೂ ಆ ಹಣದ ವಾರಸುದಾರರು ಪತ್ತೆಯಾಗಿಲ್ಲ. ಯಾರೂ ಸಹ `ಆ ಹಣ ನನ್ನದು’ ಎಂದು ಅದನ್ನು ಪಡೆಯಲು ಮುಂದೆ ಬಂದಿಲ್ಲ!
ಹುಬ್ಬಳ್ಳಿ ಅಂಕೋಲಾ ಹೆದ್ದಾರಿ ಅಂಚಿನ ರಾಮನಗುಳಿ ಬಳಿ ಐಷಾರಾಮಿ ಕಾರೊಂದು ಅನಾಥವಾಗಿ ಬಿದ್ದಿತ್ತು. ಕಾರಿನ ಗ್ಲಾಸುಗಳು ಒಡೆದಿದ್ದರಿಂದ ಅನೇಕರು ಕಾರು ಅಪಘಾತವಾಗಿದೆ ಎಂದು ಭಾವಿಸಿದ್ದರು. ಪೊಲೀಸರು ಬಂದು ಪರಿಶೀಲಿಸಿದ್ದರು. ಆಗ, ಕಾರಿನ ಒಳಗೆ 1.14 ಲಕ್ಷ ರೂ ಹಣ ಪತ್ತೆಯಾಗಿದ್ದು, ಆ ಹಣದ ಜೊತೆ ಕಾರನ್ನು ಪೊಲೀಸ್ ಸಿಬ್ಬಂದಿ ವಶಕ್ಕೆ ಪಡೆದಿದ್ದರು.
ಇನ್ನಷ್ಟು ವಿಚಾರಣೆ ನಡೆಸಿದಾಗ ಆ ಕಾರಿನ ನೋಂದಣಿ ಸಂಖ್ಯೆ ನಕಲಿ ಎಂದು ಗೊತ್ತಾಯಿತು. ಕಾರಿನೊಳಗೆ ಇನ್ನು ಹಲವು ಬಗೆಯ ನೋಂದಣಿ ಸಂಖ್ಯೆಗಳಿದ್ದವು. ಈ ನಡುವೆ ಮಂಗಳೂರಿನ ವ್ಯಕ್ತಿಯೊಬ್ಬ `ಆ ಕಾರು ತನ್ನದು’ ಎಂದು ಹೇಳಿಕೊಂಡಿದ್ದ. `ಅರಬೈಲಿನಲ್ಲಿ ತನ್ನ ಮೇಲೆ ದಾಳಿ ನಡೆಸಿ ಕಾರು ದೋಚಿದರು’ ಎಂದು ಆತ ಫೋನ್ ಮಾಡಿದ್ದ. ಆದರೆ, ಪೊಲೀಸರು ಸಾಕಷ್ಟು ಪ್ರಯತ್ನ ನಡೆಸಿದರೂ ಈವರೆಗೂ ಫೋನ್ ಮಾಡಿದ ವ್ಯಕ್ತಿ ಸಿಕ್ಕಿಲ್ಲ.
ಮಂಗಳೂರಿನ ರಾಜೇಶ ಪವಾರ್ ಎಂಬಾತ ಆ ಕಾರಿನ ಮಾಲಕ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆದರೆ, ಆತನ ವಿಳಾಸ ಹುಡುಕಿ ಹೋದರೂ ಯಾವುದೇ ಸುಳಿವು ಸಿಕ್ಕಿಲ್ಲ. ಹವಾಲಾ ದಾಳಿ ಹಾಗೂ ಚುನಾವಣಾ ಅವಧಿಯಲ್ಲಿ ಸಿಕ್ಕಿಬಿದ್ದ ಹಣವನ್ನು ವಾರಸುದಾರರು ಬಂದು `ತಮ್ಮದು’ ಎಂದು ಘೋಷಿಸಿಕೊಳ್ಳುತ್ತಾರೆ. ಆದರೆ, ರಾಮನಗುಳಿಯಲ್ಲಿ ಸಿಕ್ಕ ಹಣದ ಬಗ್ಗೆ ವಾರಸುದಾರರು ಮೌನವಾಗಿಯೇ ಉಳಿದಿದ್ದಾರೆ.
ಹೀಗಾಗಿ ಹಣದ ಮೂಲ ಯಾವುದು? ಎಂದು ಈವರೆಗೂ ಪೊಲೀಸರಿಗೆ ಗೊತ್ತಾಗುತ್ತಿಲ್ಲ. ಅನುಮಾನಾಸ್ಪದ ಕಾರು ಹಾಗೂ ಸಿಕ್ಕ ಹಣದ ಬಗ್ಗೆ ದಿನಕ್ಕೊಂದು ಊಹಾಪೋಹಗಳು ಹರಡುತ್ತಿದ್ದು, ಯಾವುದನ್ನು ಸಹ ಅಧಿಕೃತವಾಗಿ ಸತ್ಯ ಎನ್ನಲು ಸಾಧ್ಯವಾಗುತ್ತಿಲ್ಲ!