ಯಲ್ಲಾಪುರ: ಆನಗೋಡು ಶಾಲಾ ವಾರ್ಷಿಕೋತ್ಸವಕ್ಕೆ ಆಗಮಿಸಿದವರನ್ನು ಶಾಲೆಯ ಮಕ್ಕಳು ವಿಭಿನ್ನವಾಗಿ ಸ್ವಾಗತಿಸಿದರು. ಶಾಲಾ ಕಮಾನಿನಿಂದ ವೇದಿಕೆಯವರೆಗೂ 45 ಮಕ್ಕಳು ಫೋಟೋಗಳ ಮೂಲಕ ಕೈ ಮುಗಿದು ನಿಂತಿದ್ದರು!
ಆನಗೋಡು ಹಿರಿಯ ಪ್ರಾಥಮಿಕ ಶಾಲೆ ಮೊದಲಿನಿಂದಲೂ ವಿಭಿನ್ನ ಚಟುವಟಿಕೆಗಳಿಂದ ಹೆಸರು ಪಡೆದಿದೆ. ಇಲ್ಲಿನ ಶಿಕ್ಷಕರಂತೆ ಮಕ್ಕಳು ಸಹ ಅಷ್ಟೇ ಚುರುಕು. ಶನಿವಾರ ಸಂಜೆ ಆನಗೋಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅದ್ಧೂರಿ ವಾರ್ಷಿಕ ಉತ್ಸವ ನಡೆದಿದ್ದು, ಭವ್ಯವಾದ ಮಹಾದ್ವಾರ ಹಾಗೂ ಮಂದವಾದ ಲೈಟಿಂಗ್ ವ್ಯವಸ್ಥೆ ಅತ್ಯಂತ ಅಚ್ಚುಕಟ್ಟಾಗಿ ಕಾಣಿಸಿತು. ಬಾಳೆದಿಂಡು ಹಾಗೂ ಹುಲ್ಲಿನ ಹೊದಿಕೆಯ ಮಂಟಪದ ಬಳಿ ನಿಂತು ಅನೇಕರು ಫೋಟೋ ಕ್ಲಿಕ್ಕಿಸಿಕೊಂಡರು. ಮಡಿಕೆಗಳಿಂದ ಆವೃತವಾದ ಮಂಟಪ ಹಾಗೂ ಅದರ ಹಿಂದಿನ ಕೃತಕ ನಕ್ಷತ್ರ ಗಮನಸೆಳೆದವು.
ಶಾಲಾ ಮುಖ್ಯ ಶಿಕ್ಷಕಿ ಸವಿತಾ ಹೆಗಡೆ ಅಚ್ಚುಕಟ್ಟು ವ್ಯವಸ್ಥೆಗಾಗಿ ಎಲ್ಲಾ ಕಡೆ ಓಡಾಡುತ್ತಿದ್ದರು. ಸಹ ಶಿಕ್ಷಕ ಮಾರುತಿ ಆಚಾರಿ ಶಾಲಾ ಆವರಣದ ಅಲಂಕಾರದಲ್ಲಿ ತಮ್ಮನ್ನು ತೊಡಗಿಸಿದ್ದರು. ಸಹ ಶಿಕ್ಷಕರಾದ ಪ್ರತಿಭಾ ನಾಯ್ಕ ಹಾಗೂ ಸೌಮ್ಯಶ್ರೀ ಹಾನಗಲ್ ಅವರು ಕಾರ್ಯಕ್ರಮಕ್ಕೆ ವೇದಿಕೆ ಹಾಗೂ ಮಕ್ಕಳ ವೇದಿಕೆ ಪ್ರದರ್ಶನಕ್ಕೆ ತಯಾರಿ ನಡೆಸುತ್ತಿದ್ದರು. ಇನ್ನೂ ಶಾಲಾ ಎಸ್ಡಿಎಂಸಿ ಅಧ್ಯಕ್ಷ ನಾಗೇಂದ್ರ ಭಟ್ಟ ಎರಡ್ಮೂರು ದಿನದಿಂದ ಶಾಲಾ ಆವರಣದಲ್ಲಿಯೇ ಬೀಡು ಬಿಟ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಈ ಎಲ್ಲಾ ಪ್ರಯತ್ನವಾಗಿ ಅಚ್ಚುಕಟ್ಟಾದ ಕಾರ್ಯಕ್ರಮ ನಡೆಯಿತು. ಈ ಎಲ್ಲಾ ಸಿದ್ಧತೆಗಳಲ್ಲಿ ಪಾಲಕರು ಹಾಗೂ ಊರಿನವರು ತೊಡಗಿಕೊಂಡಿದ್ದರು.
ಗ್ರಾ ಪಂ ಅಧ್ಯಕ್ಷೆ ಮೀನಾಕ್ಷಿ ಭಟ್ಟ, ಗ್ರಾ ಪಂ ಸದಸ್ಯ ಪರಮೇಶ್ವರ ಗಾಂವ್ಕರ್, ನಿವೃತ್ತ ಶಿಕ್ಷಕ ಮಹಾದೇವ ನಾಯ್ಕ ಕುಳವೆ, ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷ ಜಿಗಳೂರು, ಸಂಪನ್ಮೂಲ ವ್ಯಕ್ತಿ ಚಂದ್ರಹಾಸ್ ನಾಯ್ಕ, ಎಸ್ಡಿಎಂಸಿ ಉಪಾಧ್ಯಕ್ಷೆ ಭುವನೇಶ್ವರಿ ಗಾಂವ್ಕರ್, ಪ್ರಮುಖರಾದ ರಾಮಚಂದ್ರ ಚಿಕ್ಯಾನಮನೆ, ಜಿ ಜಿ ಭಟ್ಟ ದಿವಾಕರ್ ಮನೆ, ಜಿ ಜಿ ಭಟ್ಟ ಕೈಶೆಟ್ಟಿಮನೆ ವೇದಿಕೆಯಲ್ಲಿದ್ದರು.
ಸಾಧಕರಿಗೆ ಸನ್ಮಾನ
ಆನಗೋಡು ಸರ್ಕಾರಿ ಶಾಲೆಯಲ್ಲಿ ಕಲಿತು ಪ್ರಸ್ತುತ ಶಿರಸಿ ಎಂಇಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾಗಿರುವ ಜಿ ಟಿ ಭಟ್ಟ ಅವರನ್ನು ಈ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಯಲ್ಲಾಪುರ ತಾಲೂಕ ನೌಕರರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಂಜೀವಕುಮಾರ ಹೊಸ್ಕೇರಿ ಅವರನ್ನು ಗೌರವಿಸಲಾಯಿತು. ಶಾಲಾ ನಿವೃತ್ತ ಶಿಕ್ಷಕಿ ಗಂಗಾ ಖಾಂಡೇಕರ್ ಹಾಗೂ ಸುನಂದಾ ಭಟ್ಟ ಅವರನ್ನು ಎಸ್ಡಿಎಂಸಿ ಸಮಿತಿಯವರು ಸನ್ಮಾನಿಸಿದರು.
ರಾಜ್ಯಮಟ್ಟದ ಗುರುಭೂಷಣ ಪ್ರಶಸ್ತಿ ಪಡೆದಿರುವ ಶಿಕ್ಷಕ ಮಾರುತಿ ಆಚಾರಿ ಹಾಗೂ ಶಾಲೆಯ ಮುಖ್ಯ ಶಿಕ್ಷಕಿ ಸವಿತಾ ಹೆಗಡೆ ಅವರ ಸಾಧನೆಯನ್ನು ಗುರುತಿಸಿ ಗೌರವಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಶ್ರೀಶ ಹೆಗಡೆ, ಸಮೃದ್ಧಿ ಭಾಗ್ವತ, ಶ್ರಿಯಾ ಭಟ್ಟ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ಈ ವೇಳೆ ವಿದ್ಯಾರ್ಥಿಗಳೆಲ್ಲರೂ ಸೇರಿ ಸಿದ್ಧಪಡಿಸಿದ `ಚಿಗುರು’ ಪತ್ರಿಕೆಯ ಅನಾವರಣವೂ ನಡೆಯಿತು.
ಸಭೆ ನಂತರ ಮನರಂಜನೆ!
ಸಭಾ ಕಾರ್ಯಕ್ರಮದ ನಂತರ ನಡೆದ ಗೊಂಬೆಯಾಟ, ನಾಟಕಕ್ಕೆ ಚಪ್ಪಾಳೆಗಳ ಸುರಿಮಳೆಯಾಯಿತು. ಕಂಸಾಳೆ ಯಕ್ಷಗಾನಕ್ಕೆ ಪ್ರೇಕ್ಷಕರು ತಲೆದೂಗಿದರು. ರಾಜಸ್ಥಾನಿ ನೃತ್ಯ, ಅರಣ್ಯವಾಸಿಗಳ ನೃತ್ಯಗಳು ನಡೆದವು. ಸಾವಿರಾರು ಜನ ಆಗಮಿಸಿ ಕಾರ್ಯಕ್ರಮ ವೀಕ್ಷಿಸಿದರು.