ಒಂಬತ್ತು ವರ್ಷಗಳ ಹಿಂದೆ ಸಗ್ಗುಬಾಯಿ ಅವರ ಸಾವಿಗೆ ಕಾರಣವಾಗಿದ್ದ ಕರಡಿ ಇದೀಗ ಅವರ ಪುತ್ರ ರಾಮು (31) ಅವರ ಮೇಲೆ ದಾಳಿ ಮಾಡಿದೆ. ರಾಮು ಕೊಕ್ಕರೆ ಅವರ ಅರ್ದ ತಲೆಯನ್ನು ಕರಡಿ ಭಕ್ಷಿಸಿದ್ದು, ಮೆದುಳಿನ ಒಂದು ಭಾಗ ಸಹ ವನ್ಯಜೀವಿಗೆ ಆಹಾರವಾಗಿದೆ!
ಮುಂಡಗೋಡಿನ ಹುಲಿಹೊಂಡ ಊರಿನಲ್ಲಿ ವಾಸವಾಗಿದ್ದ ಸಗ್ಗುಬಾಯಿ ಜಾನು ಕೊಕ್ಕರೆ ಅವರ ಮೇಲೆ 9 ವರ್ಷಗಳ ಹಿಂದೆ ಕರಡಿ ದಾಳಿ ನಡೆಸಿತ್ತು. ಸಾಕಷ್ಟು ಹೋರಾಟ ನಡೆಸಿದರೂ ಅವರು ಬದುಕಲಿಲ್ಲ. ಕುಟುಂಬದವರು ಕಾನೂನು ಹೋರಾಟ ನಡೆಸಿದರೂ ಅವರಿಗೆ ಪರಿಹಾರ ಸಿಗಲಿಲ್ಲ. ಇದೀಗ ಅವರ ಮಗ ರಾಮು ಜಾನು ಕೊಕ್ಕರೆ ಮೇಲೆ ಕರಡಿ ಆಕ್ರಮಣ ನಡೆಸಿದ್ದು, ಆ ದಾಳಿಗೆ ರಾಮು ಬದುಕಿರುವುದೇ ದೊಡ್ಡ ಪವಾಡ!
ಸಿಂಗನಳ್ಳಿ ಬಳಿಯ ರಾಮು ಸೆ 30ರಂದು ಹೊಲ ಕಾಯಲು ಹೋಗಿದ್ದರು. ಸಂಜೆ ಮರಳಿ ಮನೆಗೆ ಬರುವಾಗ ಅವರಿಗೆ ಕರಡಿ ಕಾಣಿಸಿದೆ. ಕರಡಿಯಿಂದ ತಪ್ಪಿಸಿಕೊಳ್ಳಲು ಅವರು ಸಾಕಷ್ಟು ಪ್ರಯೋಜನ ನಡೆಸಿದರೂ ಪ್ರಯೋಜನವಾಗಿಲ್ಲ. ರಾಮು ಅವರ ಮೇಲೆ ಆಕ್ರಮಣ ನಡೆಸಿದ ಕರಡಿ ತಲೆಯ ಮದ್ಯಭಾಗದಲ್ಲಿ ಹೊಂಡ ಮಾಡಿ ಮೆದುಳನ್ನು ಭಕ್ಷಿಸಿದೆ. ಅರೆಬರೆ ಮೆದುಳು ಇದೀಗ ಕಾಣಿಸುತ್ತಿದೆ. ಗಾಯಗೊಂಡ ರಾಮು ಇದೀಗ ಮಂಕಾಗಿದ್ದು, ಸರಿಯಾಗಿ ಮಾತನಾಡಲು ಸಹ ಅವರಿಂದ ಆಗುತ್ತಿಲ್ಲ.
ಕರಡಿ ದಾಳಿ ನಡೆಸಿದ ನಂತರ ರಾಮು ದೊಡ್ಡದಾಗಿ ಬೊಬ್ಬೆ ಹಾಕಿದ್ದಾರೆ. ಆಗ ಅಲ್ಲಿದ್ದ ಕೆಲವರು ಓಡಿ ಬಂದಿದ್ದು, ಆಗ ಕರಡಿ ಅಲ್ಲಿಂದ ಪರಾರಿಯಾಗಿದೆ. ಕರಡಿ ದಾಳಿಯಿಂದ ಜೀವ ಉಳಿಸಿಕೊಂಡ ರಾಮು ಅವರನ್ನು ಸ್ನೇಹಿತರೆಲ್ಲ ಸೇರಿ ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ. `ಕರಡಿ ದಾಳಿ ನಂತರ ರಾಮು ಮಬ್ಬಾಗಿದ್ದಾರೆ. ಸರಿಯಾಗಿ ಮಾತನಾಡುತ್ತಿಲ್ಲ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ’ ಎಂದು ಅವರ ಸ್ನೇಹಿತ ಪ್ರವೀಣ ಪಾಟೀಲ ತಿಳಿಸಿದರು.