18 ವರ್ಷಗಳ ಹಿಂದೆ ಯಲ್ಲಾಪುರ ಎಲ್ಐಸಿ ಕಚೇರಿಯ ವ್ಯವಸ್ಥಾಪಕರಾಗಿದ್ದ ಗುರು ಕಲ್ಮಠ ಅವರು ನಿವೃತ್ತಿ ನಂತರ ಮತ್ತೆ ವಿದ್ಯಾರ್ಥಿ ಜೀವನ ಶುರು ಮಾಡಿದ್ದಾರೆ. ಕಳೆದ ವರ್ಷ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿ ಸೇರಿದ ಅವರು ಶನಿವಾರ ಪದವಿ ಪೂರೈಸಿ ಹಿರಿಯ ಪತ್ರಕರ್ತ ಹಾಗೂ ಪತ್ರಿಕೋದ್ಯಮಿಗಳಿಂದ ಪ್ರಮಾಣ ಪತ್ರ ಸ್ವೀಕರಿಸಿದರು!
ಗುರು ಕಲ್ಮಠ ಅವರಿಗೆ ಇದೀಗ 70 ವರ್ಷ. ಆದರೂ ಅವರ ಕಲಿಕೆ ನಿಂತಿಲ್ಲ. 21 ವರ್ಷದ ಮಕ್ಕಳ ಜೊತೆ ಅವರು ನಿತ್ಯ ಕಾಲೇಜಿಗೆ ಬರುತ್ತಿದ್ದರು. ಸಮವಸ್ತ್ರ ಧರಿಸಿ ಬೆಳಗ್ಗೆ 9.30ಕ್ಕೆ ಕಾಲೇಜು ಪ್ರವೇಶಿಸುವ ಅವರು ಸಂಜೆ 4.30ಕ್ಕೆ ಕಾಲೇಜು ಮುಗಿದರೂ ಮನೆಗೆ ಹೋಗುತ್ತಿರಲಿಲ್ಲ. ಅಲ್ಲಿಯೇ ಕುಳಿತು ಅಭ್ಯಾಸ ಮಾಡುತ್ತಿದ್ದರು. ರಾತ್ರಿ 8 ಗಂಟೆಯವರೆಗೆ ಅವರು ಪುಟ ವಿನ್ಯಾಸ, ವಿಡಿಯೋ ಎಡಿಟಿಂಗ್ ಸೇರಿ ವಿವಿಧ ತಾಂತ್ರಿಕ ವಿಷಯಗಳ ಬಗ್ಗೆ ಕರಗತ ಮಾಡಿಕೊಳ್ಳುತ್ತಿದ್ದರು. ಇದೀಗ ತಾಂತ್ರಿಕ ವಿಷಯದಲ್ಲಿ ಸಂಪೂರ್ಣ ಪರಿಣಿತಿ ಪಡೆದ ಅವರು ಪರಿಪೂರ್ಣ ಪತ್ರಕರ್ತರಾಗಿ ಹೊರಹೊಮ್ಮಿದ್ದಾರೆ.
ಹಿರಿ ವಯಸ್ಸಿನ ಕಿರಿಯ ಪತ್ರಕರ್ತ!
ವರ್ಷದ ಹಿಂದೆ ಪತ್ರಿಕೋದ್ಯಮ ಶಿಕ್ಷಣ ಪ್ರವೇಶ ಬಯಸಿ ಗುರು ಕಲ್ಮಠ ಅವರು ವಿಶ್ವದರ್ಶನಕ್ಕೆ ಬಂದಾಗ ಎಲ್ಲರೂ ಅಚ್ಚರಿಗೊಳಗಾಗಿದ್ದರು. ಅಲ್ಲಿ ಕಲಿಸುವ ಪ್ರಾಚಾರ್ಯರು ಸಹ ಗುರು ಕಲ್ಮಠ ಅವರಿಗಿಂತ 6 ವರ್ಷ ಚಿಕ್ಕವರಾಗಿದ್ದ ಕಾರಣ ಹಿರಿಯ ಮನುಷ್ಯರಿಗೆ ಕಲಿಸುವುದು ಹೇಗೆ? ಎಂಬ ಪ್ರಶ್ನೆ ಉದ್ಬವಿಸಿತ್ತು. ಇತರೆ ವಿದ್ಯಾರ್ಥಿಗಳ ಜೊತೆ ಅವರು ಹೊಂದಿಕೊoಡು ಹೋಗುತ್ತಾರೆಯೇ? ಎಂಬ ಅನುಮಾನ ಸಹ ಕಾಡಿತ್ತು. ಎಲ್ಲರ ಹಾಗೇ ಅವರಿಗೂ ಸಮವಸ್ತ್ರನೀಡುವುದಾ? ಅಥವಾ ವಯಸ್ಸಾದ ಕಾರಣ ಹಲವು ವಿಷಯದಲ್ಲಿ ಅವರಿಗೆ ವಿನಾಯತಿ ಕೊಡುವುದಾ? ಎಂಬ ಬಗ್ಗೆ ಚರ್ಚೆ ನಡೆದಿತ್ತು.
ಆದರೆ, ಈ ಎಲ್ಲಾ ಪ್ರಶ್ನೆಗಳಿಗೆ ಗುರು ಕಲ್ಮಠ ಅವರೇ ಉತ್ತರವಾದರು. `ನನಗೆ ಯಾವುದೇವಿನಾಯತಿ ಬೇಡ. ಎಲ್ಲರಂತೆ ನನಗೂ ಪತ್ರಿಕೋದ್ಯಮ ಕಲಿಕೆಗೆ ಪ್ರವೇಶ ಕೊಡಿ. ನಾನು ಒಬ್ಬ ವಿದ್ಯಾರ್ಥಿಯಾಗಿರುವೆ’ ಎಂದು ಮನವಿ ಮಾಡಿದರು. ಸಾಹಿತ್ಯ ವಿಷಯವಾಗಿಯೂ ಅಪಾರ ಆಸಕ್ತಿ ಇರುವುದನ್ನು ಗಮನಿಸಿ ವಿಶ್ವದರ್ಶನ ಸಂಸ್ಥೆಯವರು ಅವರನ್ನು ಬರಮಾಡಿಕೊಂಡರು. ಅದಾದ ನಂತರ ಪ್ರತಿ ತರಗತಿಯಲ್ಲಿಯೂ ಅವರು ಇತರೆ ಮಕ್ಕಳ ಜೊತೆ ಬೆರೆತರು. ಸಂಸ್ಥೆಯ ಎಲ್ಲ ನಿಯಮ ಪಾಲಿಸಿದರು. ಎಲ್ಲರಂತೆ ಸಮವಸ್ತ್ರ ಧರಿಸಿ ಬರುತ್ತಿದ್ದ ಅವರು ಒಂದು ದಿನವೂ ಕಾಲೇಜು ತಪ್ಪಿಸಿದ್ದಿಲ್ಲ. ಸತತ ಶ್ರಮ, ಸಾಧನೆ ಪರಿಣಾಮವಾಗಿ ಹಿರಿಯ ವಯಸ್ಸಿನ ಕಿರಿಯ ಪತ್ರಕರ್ತರಾಗಿ ಅವರು ಗುರುತಿಸಿಕೊಂಡರು!
ಬೀರಣ್ಣ ಮೊಗಟಾ ನೆಚ್ಚಿನ ಗುರು
ಗುರು ಕಲ್ಮಠ ಅವರಿಗೆ ಪತ್ರಿಕೋದ್ಯಮ ವಿಷಯ ಕಲಿಕೆಯಲ್ಲಿ ಬೀರಣ್ಣ ನಾಯಕ ಮೊಗಟಾ ಅವರು ನೆಚ್ಚಿನ ಗುರು. `ರಾಜಕೀಯ ಹಾಗೂ ಪತ್ರಿಕೋದ್ಯಮದ ಬಗ್ಗೆ ಬೀರಣ್ಣ ನಾಯಕ ಮೊಗಟಾ ಅವರು ಕಲಿಸಿದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇದರೊಂದಿಗೆ ಕಂಪ್ಯುಟರ್ ಬಳಕೆ ಕುರಿತು ಇಲ್ಲಿ ಸಾಕಷ್ಟು ಕಲಿತಿದ್ದೇನೆ’ ಎಂದು ಗುರು ಕಲ್ಮಠ ತಮ್ಮ ಅನುಭವ ಹಂಚಿಕೊoಡರು.
ಇನ್ನೂ ಗುರು ಕಲ್ಮಠ ಅವರು ಪತ್ರಿಕೋದ್ಯಮ ಕಲಿಕೆಗಾಗಿಯೇ ಯಲ್ಲಾಪುರಕ್ಕೆ ಬಂದಿದ್ದು, ಇಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು. ವಾರಕ್ಕೆ ಒಮ್ಮೆ ಹುಬ್ಬಳ್ಳಿಗೆ ಹೋಗಿ ಬರುತ್ತಿದ್ದರು. ಪ್ರತಿ ಸೋಮವಾರ ಕಾಲೇಜಿಗೆ ಬರುವಾಗಲೂ ಪತ್ನಿ ರೊಟ್ಟಿ ಊಟ ಕಟ್ಟಿಕೊಡುತ್ತಿದ್ದರು. `ತಮ್ಮ ಈ ಕಲಿಕೆಗೆ ಕುಟುಂಬದ ಪ್ರೋತ್ಸಾಹವೂ ಕಾರಣ’ ಎಂದು ಗುರು ಕಲ್ಮಠ ನೆನೆಸಿಕೊಂಡರು. `ಕಾಲೇಜು ಪ್ರಾಚಾರ್ಯ ನಾಗರಾಜ ಇಳೆಗುಂಡಿ ಹಾಗೂ ಉಪನ್ಯಾಸಕ ವಿನಯ ಹೆಗಡೆ ಅವರ ಪಾಠವನ್ನು ಮರೆಯುವಂತಿಲ್ಲ. ಅವರು ನೀಡಿದ ಉತ್ತೇಜನದಿಂದಲೇ ಇನ್ ಡಿಸೈನ್, ಫೋಟೋಶಾಫ್ ಸೇರಿ ವಿವಿಧ ಪರೀಕ್ಷೆಗಳಲ್ಲಿ ತಾನು ಮೊದಲ ಸ್ಥಾನ ಪಡೆದಿದ್ದೇನೆ’ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಯೂಟೂಬ್ ಚಾನಲ್ ಮಾಡುವ ಬಯಕೆ
ಗುರು ಕಲ್ಮಠ ಅವರು ಕಥೆ-ಕವನಗಳನ್ನು ಬರೆದಿದ್ದರು. ಆದರೆ, ಕಂಪ್ಯುಟರ್ ಬಗ್ಗೆ ಅವರಿಗೆ ಜ್ಞಾನ ಇರಲಿಲ್ಲ. ಪತ್ರಿಕೋದ್ಯಮ ಕಲಿಕೆಯಲ್ಲಿ ಅವರು ಕಂಪ್ಯುಟರ್ ಹಾಗೂ ಯೂಟೂಬ್ ಬಗ್ಗೆ ಮಾಹಿತಿ ಪಡೆದರು. ಇದೀಗ ಅವರು ಸ್ವಂತ ಯೂಟೂಬ್ ಚಾನಲ್ ಶುರು ಮಾಡುವ ಬಯಕೆ ಹೊಂದಿದ್ದಾರೆ. `ಕಲಿಕೆ ಎಂದಿಗೂ ನಿರಂತರ. ಹೀಗಾಗಿ ನಾನು ಯಾವಾಗಲೂ ವಿದ್ಯಾರ್ಥಿ’ ಎಂದವರು ಪ್ರತಿಕ್ರಿಯಿಸಿದರು.