ಕಾರವಾರ: ಲಾರಿ ಚಾಲಕನ ಮೇಲೆ ಅಬಕಾರಿ ಅಧಿಕಾರಿ ಹಾಗೂ ಸಿಬ್ಬಂದಿ ಮಾಡಿದ ಹಲ್ಲೆ ವಿರುದ್ಧ ಮಾಜಾಳಿಯಲ್ಲಿ ನಡೆದ ಪ್ರತಿಭಟನೆಗೆ ಬೆಂಬಲ ನೀಡಿದ್ದ ಕರ್ನಾಟಕ ರಕ್ಷಣಾ ವೇದಿಕೆ ಇದೀಗ ಲಾರಿ ಚಾಲಕನ ವಿರುದ್ಧ ತಿರುಗಿಬಿದ್ದಿದೆ. `ಅಬಕಾರಿ ಅಧಿಕಾರಿಗಳು ತಪ್ಪೇ ಮಾಡಿಲ್ಲ’ ಎಂದು ಆ ಸಂಘಟನೆಯವರು ಹೇಳುತ್ತಿದ್ದಾರೆ. ಕನ್ನಡ ಸಂಘಟನೆಯ ಭಿನ್ನರಾಗದ ಬಗ್ಗೆ ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಮಂಡ್ಯದ ಕುಮಾರ್ ಗೌಡ ಎಂಬ ಚಾಲಕನನ್ನು ಮಾಜಾಳಿ ಗಡಿಯಲ್ಲಿ ಅಬಕಾರಿ ಅಧಿಕಾರಿಗಳು ಥಳಿಸಿದ್ದರು. ಈ ವೇಳೆ ಅಲ್ಲಿಗೆ ಬಂದಿದ್ದ ಕರವೇ ಜಿಲ್ಲಾಧ್ಯಕ್ಷ ಅಕ್ಷಯ್ ಎಂಬಾತರು ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. `ಭ್ರಷ್ಟರನ್ನು ಒಟ್ಟಿಗೆ ಸೆದೆಬಡಿಯೋಣ’ ಎಂದು ಕುಮಾರ ಅವರಿಗೆ ಧೈರ್ಯ ಹೇಳಿದ್ದರು. ಆದರೆ, ಸದಾಶಿವ ಕುರ್ತಿ ಹಾಗೂ ಹೇಮಚಂದ್ರ ಹೆಸರು ಕೇಳಿದ ತಕ್ಷಣ ರಾಜಿ ಮಾತುಕತೆ ಮಾಡಿದ್ದರು. ಇದಾಗಿಯೂ ಮಾಜಾಳಿ ಗಡಿಯಲ್ಲಿ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಹಾಗೂ ಲಾರಿ ಚಾಲಕ-ಮಾಲಕರ ಸಂಘದವರು ದೊಡ್ಡ ಪ್ರಮಾಣದಲ್ಲಿ ಪ್ರತಿಭಟಿಸಿದ್ದರು. ಆಗ ಕರ್ನಾಟಕ ರಕ್ಷಣಾ ವೇದಿಕೆಯ ಅಕ್ಷಯ ಸಹ ಅಲ್ಲಿಗೆ ಬಂದಿದ್ದರು. ಆದರೆ, ಭಾಷಣ ಮಾಡಲು ಅವರಿಗೆ ಅವಕಾಶ ಸಿಕ್ಕಿರಲಿಲ್ಲ.
ಇದಾಗಿ ತಿಂಗಳು ಕಳೆದ ನಂತರ ಕರವೆ ಬಣದ ಅಕ್ಷಯ ಅಬಕಾರಿ ಅಧಿಕಾರಿಗಳ ಪರವಾಗಿ ಮಾತನಾಡಿದ್ದಾರೆ. `ಆ ಇಬ್ಬರನ್ನು ಪುನಃ ಕಾರವಾರಕ್ಕೆ ನೇಮಿಸಬೇಕು’ ಎಂದು ಕರವೇ ತಂಡ ಪ್ರತಿಭಟನೆಯನ್ನು ನಡೆಸಿದೆ. ಈ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ. `ಕನ್ನಡ ಸಂಘಟನೆಯವರೊಬ್ಬರು ಈ ಪ್ರಕರಣವನ್ನು ರಾಜಿ ಮಾಡಿಕೊಳ್ಳಿ ಎಂದಿದ್ದರು. ಅದಕ್ಕೆ ನಾನು ಒಪ್ಪಿರಲಿಲ್ಲ’ ಎಂದು ಸಹ ಲಾರಿ ಚಾಲಕ ಕುಮಾರ ಗೌಡ ಹೇಳಿದ್ದಾರೆ.
ಕರವೇ ಹೋರಾಟದ ಬಗ್ಗೆ ಲಾರಿ ಚಾಲಕ ಕುಮಾರ ಗೌಡ ಹೇಳಿದ್ದೇನು? ವಿಡಿಯೋ ಇಲ್ಲಿ ನೋಡಿ..