ಅಂಕೋಲಾ ಡೋಂಗ್ರಿ-ಹೆಬ್ಬಾರಗುಡ್ಡದ ಜನ ಸೋಮವಾರ ಕಾರವಾರ ಆಗಮಿಸಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ್ದು, `ಊರಿಗೆ ಕನಿಷ್ಟ ಮೂಲಭೂತ ಸೌಕರ್ಯವನ್ನಾದರೂ ಕಲ್ಪಿಸಿ’ ಎಂದು ಅಳಲು ತೋಡಿಕೊಂಡಿದ್ದಾರೆ.
`ಗ್ರಾಮಕ್ಕೆ ತೆರಳಲು ಸರಿಯಾದ ರಸ್ತೆ ಇಲ್ಲ. ರಸ್ತೆಯಿಲ್ಲದ ಕಾರಣ ಸಾರಿಗೆ ವ್ಯವಸ್ಥೆ ಸಹ ಇಲ್ಲ. ಕಂಬ ಎಳೆದರೂ ವಿದ್ಯುತ್ ಪೂರೈಕೆ ಇಲ್ಲ. ಅನಾರೋಗ್ಯಕ್ಕೆ ಒಳಗಾದವರಿಗೆ ಚಿಕಿತ್ಸೆ ಕೊಡಿಸಲು ಆರೋಗ್ಯ ಕೇಂದ್ರವೂ ಇಲ್ಲ’ ಎಂದು ವಿವರಿಸಿದರು.
`ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅನೇಕ ಬಾರಿ ಸರ್ಕಾರಕ್ಕೆ ಅರ್ಜಿ ಕೊಡಲಾಗಿದೆ. ಆದರೆ, 50ಕ್ಕೂ ಅಧಿಕ ಕುಟುಂಬಗಳಿರುವ ಊರನ್ನು ಸರ್ಕಾರ ಮರೆತಿದೆ’ ಎಂದು ಅಸಮಧಾನವ್ಯಕ್ತಪಡಿಸಿದರು. `ಈ ಊರಿನ ಮಕ್ಕಳ ಶಿಕ್ಷಣಕ್ಕೆ ಶಾಲೆಯಿಲ್ಲ. ಊರಿಗೆ ಬರಲು ನಡಿಗೆ ಅನಿವಾರ್ಯವಾಗಿದ್ದು, ಮಳೆಗಾಲದ ಪರಿಸ್ಥಿತಿ ಯಾರಿಗೂ ಬೇಡ’ ಎಂದು ವಸ್ತುಸ್ಥಿತಿ ವಿವರಿಸಿದರು.
`ಹೆಬ್ಬಾರಗುಡ್ಡಕ್ಕೆ ತೆರಳಲು ರಸ್ತೆ ಮಂಜೂರಿಯಾಗಿದೆ. ಕಾನೂನು ಪ್ರಕ್ರಿಯೆ ಸಹ ಮುಗಿದಿದೆ. ಆದರೆ, ಗುತ್ತಿಗೆದಾರರು ಕೆಲಸ ಮಾಡುತ್ತಿಲ್ಲ’ ಎಂದು ದೂರಿದರು. ಛಾಯಾ ಗಾಂವ್ಕರ, ಶೇಶ ಗಾಂವ್ಕರ, ಸೀತಾ ಸಿದ್ದಿ, ದಯಾನಂದ ಸಿದ್ದಿ, ಬಾಬು ಸಿದ್ದಿ, ನಾಗರಾಜ ಬಾಂದಿ, ಸುರೇಶ ಸಿದ್ದಿ, ನಾಗಪ್ಪ ಸಿದ್ದಿ ತಮ್ಮ ಸಮಸ್ಯೆ ಹೇಳಿಕೊಂಡರು.