ಹೊನ್ನಾವರ: ಬಟ್ಟೆ ಅಂಗಡಿ ಹಾಗೂ ಸ್ಟೇಶನರಿ ಮಳಿಗೆಗೆ ನುಗ್ಗಿದ ಕಳ್ಳರು ಅಲ್ಲಿದ್ದ ಹಣ ದೋಚಿ ಪರಾರಿಯಾಗಿದ್ದಾರೆ. ಹಣ ಕಳೆದುಕೊಂಡ ಅಂಗಡಿ ಮಾಲಕರು ಕಳ್ಳರ ಪತ್ತೆಗಾಗಿ ಪೊಲೀಸ್ ದೂರು ದಾಖಲಿಸಿದ್ದಾರೆ.
ಮುರುಡೇಶ್ವರ ತೆರನಮಕ್ಕಿಯ ವೆಂಕಟೇಶ ನಾಯ್ಕ ಅವರು ಹೊನ್ನಾವರದ ಮಾವಿನಕಟ್ಟಾದಲ್ಲಿರುವ ಅಲೆಫರ್ಡ ಕಾಂಪ್ಲೆಕ್ಸಿನಲ್ಲಿ `ಮಾರುತಿ ಪ್ರಸನ್ನ’ ಎಂಬ ಸ್ಟೇಶನರಿ ಅಂಗಡಿ ಹೊಂದಿದ್ದಾರೆ. ಡಿ 4ರ ರಾತ್ರಿ ವ್ಯಾಪಾರ ಮುಗಿಸಿದ ಅವರು ಅಂಗಡಿಯಲ್ಲಿ 12 ಸಾವಿರ ರೂ ಇರಿಸಿದ್ದರು. ಸಂಜೆ 7.30ಕ್ಕೆ ಅಂಗಡಿಗೆ ಬಾಗಿಲು ಹಾಕಿ ಮನೆಗೆ ಹೋಗಿದ್ದರು. ಮರುದಿನ ಬೆಳಗ್ಗೆ ಅಂಗಡಿಗೆ ಬಂದಾಗ ಬಾಗಿಲು ಒಡೆದಿರುವುದು ಗಮನಕ್ಕೆ ಬಂದಿತು. ಒಳಗೆ ಹೋಗಿ ಪರಿಶೀಲಿಸಿದಾಗ ಅಂಗಡಿಯಲ್ಲಿದ್ದ ಹಣ ಕಾಣೆಯಾಗಿತ್ತು.
ಮಂಕಿ ಅರೆಯಲ್ಲಿರುವ ಮಾತೃಕೃಪಾ ಕಾಂಪ್ಲೇಕ್ಸಿನಲ್ಲಿ ರಾಜಸ್ಥಾನದ ಹರೀಶಕುಮಾರ ಮಾಲಿ ಬಟ್ಟೆ ಅಂಗಡಿ ಹೊಂದಿದ್ದು, ಅದೇ ದಿನ ಅವರ ಅಂಗಡಿಯಲ್ಲಿ ಸಹ ಕಳ್ಳತನವಾಗಿದೆ. ಹರೀಶಕುಮಾರ ಅವರ `ಖುಷಿ ಕಲೆಕ್ಷನ್’ ಮಳಿಗೆ ಮುರಿದ ಕಳ್ಳರು ಅಂಗಡಿಯಲ್ಲಿದ್ದ 16 ಸಾವಿರ ರೂ ಎಗರಿಸಿದ್ದಾರೆ. ಈ ಎರಡು ಪ್ರಕರಣದ ಬೆನ್ನು ಬಿದ್ದಿರುವ ಪೊಲೀಸರು ಕಳ್ಳರ ಪತ್ತೆಗೆ ಹುಡುಕಾಟ ನಡೆಸಿದ್ದಾರೆ.