ಅಂಕೋಲಾ: ಕರಾವಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯ ಜವಾಬ್ದಾರಿವಹಿಸಿಕೊಂಡ ಐಆರ್ಬಿ ಕಂಪನಿಯ ಅವಾಂತರಗಳು ಒಂದೆರಡಲ್ಲ. ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರೂ ಅವರ ಸಚಿವ ಸಂಪುಟ ಸದಸ್ಯರೊಬ್ಬರ ಅಧೀನದಲ್ಲಿರುವ ಐಆರ್ಬಿ ಕಂಪನಿ ಸ್ವಚ್ಛತೆ ಪಾಲಿಸುತ್ತಿಲ್ಲ.
ಅಂಕೋಲಾ ತಾಲೂಕಿನ ಅಲಗೇರಿ ಹಾಗೂ ಬಾಳೆಗುಳಿ ಕ್ರಾಸಿನ ಬಳಿ ಸಾಕಷ್ಟು ಪ್ರಮಾಣದಲ್ಲಿ ಈ ಕಂಪನಿ ತ್ಯಾಜ್ಯ ಎಸೆಯುತ್ತಿದ್ದು, ಇದು ಸ್ಥಳೀಯ ಗ್ರಾಮ ಪಂಚಾಯತದ ತಲೆನೋವಿಗೆ ಕಾರಣವಾಗಿದೆ. ಹೆದ್ದಾರಿ ಪಕ್ಕದ ವಾಹನ ನಿಲುಗಡೆ ಸ್ಥಳದಲ್ಲಿ ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯದ ರಾಶಿ ಕಾಣುತ್ತಿದೆ. ನಿತ್ಯ ಇದನ್ನು ಸ್ವಚ್ಛ ಮಾಡುವುದು ಗ್ರಾ ಪಂ ಸಿಬ್ಬಂದಿಗೆ ಸಾಹಸದ ಕೆಲಸವಾಗಿದೆ. ಎಷ್ಟು ಬಾರಿ ತ್ಯಾಜ್ಯ ಆರಿಸಿದರೂ ಐಆರ್ಬಿ ಸಿಬ್ಬಂದಿ ಪದೇ ಪದೇ ಅದೇ ಜಾಗವನ್ನು ಗಲೀಜು ಮಾಡುತ್ತಿದ್ದಾರೆ.
ಇದೀಗ `ಸ್ವಚ್ಛತಾ ಹೀ ಸೇವಾ’ ಕಾರ್ಯದಲ್ಲಿ ಭಾಗವಹಿಸಲು ಬಂದ ಅಧಿಕಾರಿಗಳೇ ಅಲ್ಲಿನ ಕಸ ನೋಡಿ ತಬ್ಬಿಬ್ಬಾದರು. ಐ ಆರ್ ಬಿ ಕಂಪನಿಯವರು ಪದೇ ಪದೇ ತ್ಯಾಜ್ಯ ಎಸೆದು ಪರಿಸರ ಮಾಲಿನ್ಯ ಮಾಡುತ್ತಿರುವ ಬಗ್ಗೆ ಗ್ರಾ ಪಂ ಅಧಿಕಾರಿಗಳು ಮೇಲಧಿಕಾರಿಗಳಿಗೆ ಮನವರಿಕೆ ಮಾಡಿದ್ದು, ಮತ್ತೆ ಹೀಗೆ ಮುಂದುವರೆದರೆ ಐ ಆರ್ ಬಿ ಕಂಪನಿಗೆ ದಂಡ ವಿಧಿಸಬೇಕು ಎಂದು ಅಂಕೋಲಾ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ್ ಎಂ ಸೂಚನೆ ನೀಡಿದ್ದಾರೆ.
ಕೊನೆಗೆ `ಸ್ವಚ್ಛತಾ ಹೀ ಸೇವಾ’ ಕಾರ್ಯದ ಅಂಗವಾಗಿ ಗ್ರಾ ಪಂ ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು, ಎನ್.ಆರ್.ಎಲ್.ಎಮ್ ಸಂಜೀವಿನಿ, ಕೃಷಿ ಸಖಿ, ಪಶು ಸಖಿ ಸಂಘದ ಸದಸ್ಯರು, ನರೇಗಾ ಕೂಲಿಕಾರರು ಹಾಗೂ ಗ್ರಾಮಸ್ಥರ 80 ಜನರ ತಂಡದವರು ಅಲ್ಲಿದ್ದ ತ್ಯಾಜ್ಯಗಳನ್ನು ಆರಿಸಿದರು.