ಕಾರವಾರ: ಆಸ್ಪತ್ರೆ ವೈದ್ಯರ ಟೇಬಲ್ ಮೇಲೆ ಸ್ಟೆತೊಸ್ಕೋಪ್, ಔಷಧಿ, ಚುಚ್ಚುಮದ್ದು ಸಾಮಗ್ರಿ, ತುರ್ತು ಚಿಕಿತ್ಸಾ ಸಲಕರಣೆ ಜೊತೆ ಚೀಟಿ-ಪೆನ್ನುಗಳಿರುವುದು ಸಾಮಾನ್ಯ. ಆದರೆ, ಕಾರವಾರದ ಅಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ಟೇಬಲ್ ಮೇಲೆ ಮಾನವನ ತಲೆ ಬುರುಡೆ ಕಾಣುತ್ತದೆ!
ಒಂದು ಕಡೆ ಸೈಕಲ್, ಹಾಸಿಗೆಗಳ ಮೇಲೆ ಹರಡಿಕೊಂಡಿರುವ ಔಷಧಿ. ಅಲ್ಲಿರುವ ಟೇಬಲ್ ಮೇಲೆ ಸ್ಟೆತೊಸ್ಕೋಪ್, ಮಾತ್ರೆಗಳ ಜೊತೆ ಅಸ್ಥಿ ಪಂಜರದ ತಲೆ ಬುರುಡೆ. ಅಲ್ಲಿನ ವೈದ್ಯಾಧಿಕಾರಿ ಡಾ ಅವಿನಾಶ ಯಾವುದನ್ನು ಬೇಕಾದರೂ ಬಿಡಬಹುದು. ಆದರೆ, ತಮ್ಮ ಈ ಆಸ್ತಿಗಳನ್ನು ಅವರು ಎಂದಿಗೂ ಬಿಟ್ಟಿರಲಾರರು!
ಅಂಗಡಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ಡಾ ಅವಿನಾಶ ನಾಯ್ಕ ಅವರು ಕೆಲಸ ಮಾಡುತ್ತಿದ್ದಾರೆ. ಕೆಲಸಕ್ಕೆ ಸರಿಯಾಗಿ ಹಾಜರಾಗದಿರುವುದು, ಸ್ವಚ್ಛತೆ ಕಾಪಾಡದಿರುವುದು, ಮೇಲಧಿಕಾರಿಗಳ ಜೊತೆ ಉದ್ದಟತನದ ವರ್ತನೆ, ಹಿರಿಯರಿಗೆ ಅಗೌರವ, ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಸೇರಿ ಅವರ ಮೇಲೆ ಸಾಕಷ್ಟು ಆರೋಪಗಳಿವೆ. ಈ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತನಿಖೆ ನಡೆಸಿ ನೋಟಿಸ್ ಸಹ ಜಾರಿ ಮಾಡಿದೆ. `ನಿಮ್ಮನ್ನು ಸೇವೆಯಿಂದ ವಜಾ ಮಾಡಲಾಗುವುದು’ ಎಂಬ ಎಚ್ಚರಿಕೆಯನ್ನು ಸಹ ನೀಡಿದೆ. ಆದರೂ ಡಾ. ಅವಿನಾಶ ನಾಯ್ಕ ಇದಕ್ಕೆ ಕಿಂಚಿತ್ತು ತಲೆಕೆಡಿಸಿಕೊಂಡಿಲ್ಲ!
ಇನ್ನೂ ಅಕ್ಟೊಬರ್ ತಿಂಗಳಿನಲ್ಲಿ ಅಂಗನವಾಡಿ ಸಹಾಯಕರ ಮೂಲಕ ನಡೆಯುವ ಆರೋಗ್ಯ ತಪಾಸಣಾ ಶಿಬಿರಕ್ಕೆ ಬರುವಂತೆ ಅವರಿಗೆ ವಾಹನ ಕಳುಹಿಸಿದರೂ ಅವರು ಹಾಜರಾಗಿಲ್ಲ. ಮೊದಲು ಶಿಬಿರಕ್ಕೆ ಹಾಜರಾದರೂ ರೋಗಿಗಳ ಮಾಹಿತಿ ಬಗ್ಗೆ ವರದಿ ಸಲ್ಲಿಸಿಲ್ಲ. ಮೇಲ್ವಿಚಾರಕರ ಫೋನ್ ನಂ ಸಹ ಅವರು ಬ್ಲಾಕ್ ಮಾಡಿಕೊಂಡಿದ್ದು, ಈ ಬಗ್ಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಹ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಆದರೆ, ಇದ್ಯಾವ ದೂರಿನ ಬಗ್ಗೆಯೂ ಡಾ ಅವಿನಾಶ ಅವರಿಗೆ ಚಿಂತೆ ಇಲ್ಲ!
ಸರ್ಕಾರದ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿಯೂ ಡಾ ಅವಿನಾಶ ನಾಯ್ಕ ಎಡವಿದ್ದಾರೆ. ಆಸ್ಪತ್ರೆಯ ಔಷಧಿಗಳನ್ನು ಮನೆಗೆ ಕೊಂಡೊಯ್ಯುವ ಆರೋಪ ಸಹ ಅವರ ಮೇಲಿದೆ. ಆದರೆ, ಇದನ್ನು ಪ್ರಶ್ನಿಸಿದ ಮೇಲಧಿಕಾರಿಗಳ ವಿರುದ್ಧ ಅವರು ಸಾಮಾಜಿಕ ಜಾಲತಾಣದಲ್ಲಿ ನಿಂದನಾರ್ಹ ಬರಹ ಪ್ರಕಟಿಸುತ್ತಿದ್ದಾರೆ. ಇನ್ನಷ್ಟು ಪ್ರಶ್ನಿಸಿದರೆ, `ನಿಮ್ಮ ವಿರುದ್ಧ ಲೋಕಾಯುಕ್ತ ತನಿಖೆ ಮಾಡಿಸುವೆ’ ಎಂದೂ ಬೆದರಿಸುವ ಬಗ್ಗೆ ಕೆಲವರು ಲಿಖಿತವಾಗಿ ದೂರಿದ್ದಾರೆ.
ಡಾ ಅವಿನಾಶ ಅವರು ಅಚ್ಚುಕಟ್ಟಾಗಿ ಸಾಹಿತ್ಯ ಬರೆಯುತ್ತಾರೆ. ಕನ್ನಡ ಹಾಗೂ ಇಂಗ್ಲಿಷ್ ಪದಗಳಲ್ಲಿ ಅವರು ಮೇಲಧಿಕಾರಿಗಳನ್ನು ಅತ್ಯಂತ ಗೌರವಯುತವಾಗಿ ನಿಂದಿಸುತ್ತಾರೆ. ಅವರು ವಾಟ್ಸಪ್ ಸ್ಟೆಟಸ್ ಮೂಲಕ ಅಧಿಕಾರಿಗಳನ್ನು ಗುರಿಯಾಗಿರಿಸಿಕೊಂಡು ಬರೆಯುವುದು ಇಲಾಖೆ ಪಾಲಿಗೆ ದೊಡ್ಡ ತಲೆನೋವಾಗಿದೆ. ಊರಿನವರ ಪಾಲಿಗೆ ಅವರ ಬರಹಗಳೇ ದೊಡ್ಡ ಮನರಂಜನೆ!
ಹಾಗoತ ಡಾ ಅವಿನಾಶ ತುಂಬ ಕೆಟ್ಟವರು ಎನ್ನುವ ಹಾಗಿಲ್ಲ. ಯಾವುದೇ ರೋಗಿ ತಡರಾತ್ರಿ ಬಂದರೂ ಡಾ ಅವಿನಾಶ ಬೇಸರಿಸಿಕೊಳ್ಳದೇ ಚಿಕಿತ್ಸೆ ನೀಡುತ್ತಾರೆ. ರೋಗಿಗಳ ಬಳಿ ಅವರು ಸೌಜನ್ಯದಿಂದಲೇ ವರ್ತಿಸುತ್ತಾರೆ. ರೋಗಿಗಳ ಮನದಾಳ ಅರಿತು ಔಷಧಿ ನೀಡುವಲ್ಲಿ ಅವರು ಪರಿಣಿತರು. `ಕೆಲ ವಿದ್ಯಾರ್ಥಿಗಳು-ಸಂಶೋಧನೆ ನಡೆಸುವವರು ಆಸ್ಪತ್ರೆಗೆ ಬರುತ್ತಾರೆ. ಹೀಗಾಗಿ ಅವರಿಗೆ ಮಾಹಿತಿ ನೀಡಲು ತಲೆ ಬುರುಡೆ ಜೊತೆ ಮಾನವನ ಅಸ್ಥಿ ಪಂಜರವನ್ನಿರಿಸಲಾಗುತ್ತದೆ’ ಎಂಬುದು ಕೆಲವರ ಅಭಿಪ್ರಾಯ. ಡಾ ಅವಿನಾಶ ಅವರ ಮೇಲಿನ ದೂರುಗಳ ಬಗ್ಗೆ ಅವರಿಂದಲೇ ಮಾಹಿತಿ ಪಡೆಯುವ ಪ್ರಯತ್ನ ನಡೆಯಿತು. ಆದರೆ, ಅವರ ಸಂಪರ್ಕ ಸಾಧ್ಯವಾಗಲಿಲ್ಲ.