ಮನೆಯೊಳಗೆ ಪದೇ ಪದೇ ನಾಗರಹಾವು ಬರುತ್ತಿದ್ದ ಕಾರಣ ಸಿದ್ದಾಪುರ ತಂಡಾಗುoಡಿಯ ವಿನಾಯಕ ಗೌಡ ಕುಟುಂಬದವರು ಮನೆ ಪಕ್ಕ ಇನ್ನೊಂದು ಜೋಪಡಿ ನಿರ್ಮಿಸಿಕೊಂಡಿದ್ದರು. ಇದನ್ನು ಸಹಿಸದ 30ಕ್ಕೂ ಅಧಿಕ ಅರಣ್ಯ ಸಿಬ್ಬಂದಿ ಗುರುವಾರ ಅವರ ಜೋಪಡಿ ಮೇಲೆ ದಾಳಿ ನಡೆಸಿ, ಕುಟುಂಬದವರನ್ನು ಥಳಿಸಿದರು. ಅರಣ್ಯ ಸಿಬ್ಬಂದಿ ದೌಜನ್ಯಕ್ಕೆ ನಲುಗಿದ ದಂಪತಿ ಇದೀಗ ಶಿರಸಿ ಆಸ್ಪತ್ರೆ ಸೇರಿದ್ದಾರೆ.
ಸಿದ್ದಾಪುರ ತಾಲೂಕಿನ ತಂಡಾಗುoಡಿ ಗ್ರಾಮಪಂಚಾಯತಿ ವ್ಯಾಪ್ತಿಯ ತಾರಖಂಡ ಗ್ರಾಮದಲ್ಲಿ ಅನಾಧಿಕಾಲದಿಂದಲೂ ಕೆರಿಯಾ ಅಜ್ಜು ಗೌಡ ಕುಟುಂಬದವರು ವಾಸವಾಗಿದ್ದಾರೆ. ಆ ಕ್ಷೇತ್ರದಲ್ಲಿ ಅವರ ಹಳೆಯ ಮನೆಯೂ ಇದೆ. ಆ ಮನೆಯಲ್ಲಿ ಸದ್ಯ ವಿದ್ಯಾ ಗೌಡ ಹಾಗೂ ವಿನಾಯಕ ಗೌಡ ದಂಪತಿ ವಾಸವಾಗಿದ್ದಾರೆ. ಆದರೆ, ಈಚೆಗೆ ಮನೆಯೊಳಗೆ ಪದೇ ಪದೇ ನಾಗರ ಹಾವು ಕಾಣಿಸಿಕೊಳ್ಳುತ್ತಿದ್ದು, ನಾಗ ನಡೆಯಿಂದ ಹೊರಗೆ ಬದುಕುವುದಕ್ಕಾಗಿ ಮನೆಗೆ ತಾಗಿ ಆ ಕುಟುಂಬದವರು ಜೋಪಡಿ ನಿರ್ಮಿಸಿಕೊಂಡಿದ್ದರು. ಆದರೆ, ಇದನ್ನು ಹೊಸ ಅತಿಕ್ರಮಣ ಎಂದು ಪರಿಗಣಿಸಿದ ಅರಣ್ಯ ಸಿಬ್ಬಂದಿ ಮನುಷ್ಯತ್ವವನ್ನು ಮರೆತು ಆ ಕುಟುಂಬದವರ ಮೇಲೆ ದೌರ್ಜನ್ಯ ನಡೆಸಿದರು.
ಅರಣ್ಯ ಅತಿಕ್ರಮಣದಾರರ ಮೇಲೆ ಕೈ ಮಾಡುವ ಅಧಿಕಾರ ಯಾವ ಅಧಿಕಾರಿಗೂ ಇಲ್ಲ. ಅದಾಗಿಯೂ ದುಷ್ಟ ಅಧಿಕಾರಿಗಳು ವಿದ್ಯಾ ಗೌಡ ಅವರ ಮೇಲೆ ಕೈ ಮಾಡಿದರು. ಪರಿಣಾಮ ವಿದ್ಯಾ ಗೌಡ ಅವರು ಅಲ್ಲಿಯೇ ಮೂರ್ಚೆ ಬಿದ್ದರು. ವಿನಾಯಕ ಗೌಡ ಅವರನ್ನು ಸಹ ಥಳಿಸಿದರು. ಕೆಟ್ಟದಾಗಿ ನಿಂದಿಸಿ ಹಿಂಸಿಸಿದರು. ಅದಾದ ನಂತರ ಈ ದಂಪತಿಯನ್ನು ಅರಣ್ಯ ಇಲಾಖೆ ವಾಹನದಲ್ಲಿ ಕಚೇರಿಗೆ ತರಲು ಪ್ರಯತ್ನಿಸಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವಿದ್ಯಾ ಗೌಡ ಅವರನ್ನು ಅರಣ್ಯಾಧಿಕಾರಿಗಳೇ ಶಿರಸಿ ಆಸ್ಪತ್ರೆಗೆ ದಾಖಲಿಸಿದರು.
ಈ ವಿಷಯ ಅರಿತ ಅರಣ್ಯ ಹಕ್ಕು ಹೋರಾಟಗಾರ, ನ್ಯಾಯವಾದಿ ರವೀಂದ್ರ ನಾಯ್ಕ ಆಸ್ಪತ್ರೆಗೆ ದೌಡಾಯಿಸಿದರು. ಚಿಕಿತ್ಸೆ ಪಡೆಯುತ್ತಿರುವ ದಂಪತಿಗ ಧೈರ್ಯ ಹೇಳಿದರು. ಅರಣ್ಯ ಸಿಬ್ಬಂದಿ ಕ್ರಮ ಖಂಡಿಸಿದ ಅವರು ಸೂಕ್ತ ತನಿಖೆಗೆ ಒತ್ತಾಯಿಸಿದರು.