ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಶಾಸಕರಾಗಿ ಆಯ್ಕೆ ಆದಾಗಲೆಲ್ಲ ಜೈಲು ಸೇರುತ್ತಿದ್ದಾರೆ.
2013ರಲ್ಲಿ ಶಾಸಕರಾದಾಗ ಸಹ ಅವರು ಎರಡುವರೆ ವರ್ಷಗಳ ಕಾಲ ಜೈಲಿನಲ್ಲಿದ್ದರು. ಪ್ರಸ್ತುತ ಶಾಸಕರಾಗಿ ಆಯ್ಕೆಯಾದ ಅವರಿಗೆ ಮತ್ತೆ ಜೈಲು ಶಿಕ್ಷೆ ಅನುಭವಿಸುವ ಪರಿಸ್ಥಿತಿ ಬಂದಿದೆ.
2010ರಲ್ಲಿ ನಡೆದ ಬೇಲೆಕೆರಿ ಅದಿರು ನಾಪತ್ತೆ ಪ್ರಕರಣದಲ್ಲಿ ಸತೀಶ್ ಸೈಲ್ ಆರೋಪಿಯಾಗಿದ್ದರು. ಅವರ ಆರೋಪ ಇದೀಗ ಋಜುವಾತಾಗಿದೆ.
ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸತೀಶ್ ಸೈಲ್ ದೋಷಿ ಎಂದು ಪ್ರಕಟಿಸಿದ್ದು, ಅವರನ್ನು ವಶಕ್ಕೆ ಪಡೆಯುವಂತೆ ಸೂಚನೆ ನೀಡಿದೆ. ಈ ಬಾರಿ ಎಷ್ಟು ವರ್ಷಗಳ ಕಾಲ ಜೈಲು ಅನುಭವಿಸಬೇಕು? ಎಂಬ ಆದೇಶವನ್ನು ಕಾಯ್ದಿರಿಸಲಾಗಿದೆ.
ಅದಿರು ನಾಪತ್ತೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿತ್ತು. ವಾದ ಆಲಿಸಿದ ನ್ಯಾಯಾಲಯ ಸತೀಶ್ ಸೈಲರನ್ನು ದೋಷಿ ಎಂದು ನಿರ್ಧರಿಸಿದೆ. ಅವರನ್ನು ವಶಕ್ಕೆ ಪಡೆಯುವಂತೆಯೂ ಸೂಚಿಸಿದೆ.
ಶಾಸಕರಾಗಿ ಆಯ್ಕೆ ಆಗುವ ಮುನ್ನ ಅವರು ಆರಾಮಾಗಿದ್ದರು. ಸೋತ ನಂತರ ಸಹ ಅವರು ಕ್ಷೇತ್ರದ ಎಲ್ಲಡೆ ಓಡಾಟ ನಡೆಸಿಕೊಂಡಿದ್ದರು. ಅಧಿಕಾರ ಸಿಕ್ಕಾಗಲೇ ಅವರು ಇದೀಗ ಎರಡನೇ ಬಾರಿ ಜೈಲು ಸೇರುತ್ತಿದ್ದಾರೆ. ಶಾಸಕ ಸ್ಥಾನದ ಜೊತೆ ಎಂ ಸಿ ಎ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಸತೀಶ್ ಸೈಲ್ ಹೊಂದಿದ್ದಾರೆ.