ಕಾರವಾರ: ಉತ್ತರ ಕನ್ನಡ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ 33 ಸಾವಿರಕ್ಕೂ ಅಧಿಕ ಪ್ರಕರಣಗಳು ವಿಚಾರಣಾ ಹಂತದಲ್ಲಿದೆ. ಇದರಿಂದ ನ್ಯಾಯಾಲಯಗಳ ಮೇಲೆಯೂ ಒತ್ತಡ ಹೆಚ್ಚಾಗಿದ್ದು, ಕಕ್ಷಿದಾರರು ಸಹ ಅನಗತ್ಯವಾಗಿ ಕೋರ್ಟು-ಕಚೇರಿ ಅಲೆದಾಟ ನಡೆಸುತ್ತಿದ್ದಾರೆ. ಕಕ್ಷಿದಾರರ ಸಮಯ, ಹಣ ಉಳಿತಾಯದ ಜೊತೆ ಸಂಭವನೀಯ ಅಪರಾಧ ಚಟುವಟಿಕೆ ತಡೆಗಾಗಿ ಡಿಸೆಂಬರ್ 14ರಂದು 5 ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ರಾಜಿ-ಸಂದಾನದ ಮೂಲಕ ಬಗೆಹರಿಸಲು ನ್ಯಾಯಾಧೀಶೆ ದಿವ್ಯಶ್ರೀ ಸಿ ಎಂ ಅವರು ಆಸಕ್ತಿ ತೋರಿದ್ದಾರೆ.
ಈಗಾಗಲೇ ನ್ಯಾಯವಾದಿಗಳೊಂದಿಗೆ ಮಾತನಾಡಿದ ಅವರು ರಾಜಿ ಆಗಬಹುದಾದ ಎಲ್ಲಾ ಪ್ರಕರಣಗಳನ್ನು ರಾಜಿ ಮೂಲಕ ಬಗೆಹರಿಸುವಂತೆ ಸೂಚಿಸಿದ್ದಾರೆ. ಚೆಕ್ ಅಮಾನ್ಯ, ಸಣ್ಣಪುಟ್ಟ ಜಗಳ, ಭೂ ಸ್ವಾಧೀನ, ವಿಮೆ ಪರಿಹಾರ, ವೈವಾಹಿಕ ಹಾಗೂ ಕುಟುಂಬಿಕ ಪ್ರಕರಣಗಳನ್ನು ಮಾತುಕಥೆ ಮೂಲಕ ಬಗೆಹರಿಸುವುದಕ್ಕಾಗಿ ಅವರು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಸಮಾಜದಲ್ಲಿ ದ್ವೇಷ-ಅಸೂಯೆಯ ಭಾವನೆ ಕಡಿಮೆ ಮಾಡುವ ಪ್ರಯತ್ನದ ಅಂಗವಾಗಿ ಈಗಾಗಲೇ ಸಾಕಷ್ಟು ಪ್ರಕರಣಗಳನ್ನು ರಾಜಿ ಮೂಲಕ ಬಗೆಹರಿಸಲಾಗಿದ್ದು, ಡಿಸೆಂಬರ್ 14ರಂದು ಲೋಕ ಅದಾಲತ್ ಮೂಲಕ ಜನರ ಮನವೊಲೈಕೆಗಾಗಿ ಅವರು ಪ್ರಯತ್ನಿಸುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ನ್ಯಾಯಾಲಯದಲ್ಲಿ ಒಟ್ಟು 33,663 ಪ್ರಕರಣಗಳು ಬಾಕಿಯಿವೆ. 2392 ಪ್ರಕರಣಗಳನ್ನು ಇತ್ಯರ್ಥಕ್ಕೆ ಪಡೆಯಲಾಗಿದೆ. ಅದಾಗಿಯೂ 5 ಸಾವಿರ ಪ್ರಕರಣಗಳ ರಾಜಿಗೆ ನ್ಯಾಯಾಲಯ ಉದ್ದೇಶಿಸಿದೆ. ಕಳೆದ ಬಾರಿ ನಡೆದ ಲೋಕ ಅದಾಲತ್ನಲ್ಲಿ 4083 ಪ್ರಕರಣಗಳನ್ನು ರಾಜಿ ಸಂದಾನದ ಮೂಲಕ ಬಗೆಹರಿಸಲಾಗಿತ್ತು. ಈ ವೇಳೆ 21.10 ಕೋಟಿ ರೂ ಪರಿಹಾರ ಸಂತ್ರಸ್ತರಿಗೆ ಸಿಕ್ಕಿತ್ತು.
ಈ ಹಿನ್ನಲೆ `ಡಿಸೆಂಬರ್ 14ರಂದು ಅತ್ಯಧಿಕ ಸಂಖ್ಯೆಯಲ್ಲಿ ಕಕ್ಷಿದಾರರು ತಮ್ಮ ಪ್ರಕರಣ ರಾಜಿ ಮಾಡಿಕೊಳ್ಳಬೇಕು’ ಎಂದು ನ್ಯಾ ದಿವ್ಯಶ್ರೀ ಸಿ ಎಂ ಕರೆ ನೀಡಿದ್ದಾರೆ.