ಅರಣ್ಯ ಅತಿಕ್ರಮಣದಾರರ ಆರು ಬೇಡಿಕೆ ಈಡೇರಿಕೆ ಹಾಗೂ ಕಸ್ತೂರಿ ರಂಗನ್ ವರದಿ ವಿರೋಧಿಸಿ ಉತ್ತರ ಕನ್ನಡ ಜಿಲ್ಲೆಯ ಅರಣ್ಯವಾಸಿಗಳು ಪ್ರೀಡಂ ಪಾರ್ಕಿನಲ್ಲಿ ಗುರುವಾರ ಶಕ್ತಿ ಪ್ರದರ್ಶನ ನಡೆಸಿದರು.
10ಸಾವಿರಕ್ಕೂ ಅಧಿಕ ಅರಣ್ಯ ಅತಿಕ್ರಮಣದಾರರು ತಮ್ಮ ಹಕ್ಕಿಗಾಗಿ ಪ್ರತಿಭಟಿಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕಾನೂನು ಸಚಿವ ಎಚ್ ಕೆ ಪಾಟೀಲ್ `ಕಸ್ತೂರಿರಂಗನ್ ವಿರೋಧ ನಿಲುವು ಅಚಲ. ಅರಣ್ಯ ಭೂಮಿ ಹಕ್ಕು ನೀಡಲು ಬದ್ಧ’ ಎಂದು ವಾಗ್ಧಾನ ಮಾಡಿದರು. `ಕಸ್ತೂರಿ ರಂಗನ್ ವರದಿ ಹೋರಾಟದೊಂದಿಗೆ ರಾಜ್ಯ ಸರ್ಕಾರವು ಸಹಕರಿಸುತ್ತದೆ. ಜನ ವಿರೋಧಿ ಯೋಜನೆ ಜಾರಿಗೆ ಸರ್ಕಾರ ಅವಕಾಶ ಕೊಡಲ್ಲ’ ಎಂದು ಹೇಳಿದರು.
ಕಾನೂನುಬಾಹಿರವಾಗಿ ಅರಣ್ಯ ಒತ್ತುವರಿದಾರರನ್ನು ಒಕ್ಕಲೆಬ್ಬಿಸುವವರ ವಿರುದ್ದ ಕ್ರಮ ಜರುಗಿಸುವ ಭರವಸೆ ನೀಡಿದರು. ವಿಶ್ರಾಂತ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನದಾಸ ಮಾತನಾಡಿ `ಜನಪರ ನಿಲುವಿಗೆ ಸರ್ಕಾರ ಬದ್ಧರಾಗಿರಬೇಕು’ ಎಂದರು. ಸಮಾಜ ಕಲ್ಯಾಣ ಸಚಿವರಾದ ಎಚ್.ಸಿ ಮಹಾದೇವಪ್ಪ ಮಾತನಾಡಿ `ಬೆಳಗಾವಿ ಚಳಿಗಾಲ ಅಧೀವೇಶನದಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಕಾನೂನು ಸಮಸ್ಯೆಗಳ ಕುರಿತು ಕಾನೂನು ತಜ್ಞರು ಉನ್ನತ ಮಟ್ಟದ ವಿಶೇಷ ಸಭೆ ನಡೆಸಲಾಗುತ್ತದೆ’ ಎಂದರು.
ಕರ್ನಾಟಕ ವಿಧಾನ ಉಪಾ ಸಭಾಪತಿ ರುದ್ರಪ್ಪ ಲಮಾಣಿ `ಮುಂದಿನ ಒಂದು ವರ್ಷಗಳಲ್ಲಿ ಅರಣ್ಯ ಭೂಮಿ ಹಕ್ಕಿಗೆ ಕ್ರಮ ಜರುಗಿಸಲಾಗುತ್ತದೆ’ ಎಂದರು. ರಾಜ್ಯ ಗ್ಯಾರಂಟಿ ಸಮಿತಿ ಅಧ್ಯಕ್ಷ ಎಚ್ ಎಂ ರೇವಣ್ಣ, ಮಾನವ ಬಂಧು ವೇದಿಕೆಯ ಸಂಚಾಲಕ ಅನಂತ ನಾಯ್ಕ, ಹೋರಾಟಗಾರ ರವೀಂದ್ರ ನಾಯ್ಕ ಇತರರಿದ್ದರು.