ಕಾರವಾರ ತಾಲೂಕು ಪಂಚಾಯತ ಮಾಜಿ ಸದಸ್ಯ ಪ್ರಶಾಂತ ಗೋವೇಕರ್ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. `ಕಿನ್ನರಕ್ಕೆ ಬಂದರೆ ಲಾರಿ ಸುಡುವೆ’ ಎಂದು ಪ್ರಶಾಂತ ಗೋವೆಕರ್ ಬೆದರಿಸಿರುವುದಾಗಿ ಸಾಹಿಲ್ ಕಲ್ಗುಟ್ಕರ್ ಪೊಲೀಸ್ ದೂರು ನೀಡಿದ್ದಾರೆ.
ನಂದನಗದ್ದಾ ಸುಂಕೇರಿಯ ವಿಶ್ರಾಂತಿ ಕಟ್ಟಾದಲ್ಲಿ ವಾಸವಾಗಿರುವ ಸಾಹಿಲ್ ಕಲ್ಗುಟ್ಕರ್ ಲಾರಿ ಉದ್ದಿಮೆ ನಡೆಸುತ್ತಾರೆ. ಪ್ರಶಾಂತ ಗೋವೇಕರ್ ಹಾಗೂ ಸಾಹಿಲ್ ಕಲ್ಗುಟ್ಕರ್ ನಡುವೆ ಹಣಕಾಸಿನ ವಿಷಯದಲ್ಲಿ ವೈಮನಸ್ಸು ಉಂಟಾಗಿತ್ತು.
ಪ್ರಶಾಂತ ಗೋವೇಕರ್ ಅವರು ಸಾಹಿಲ್ ಕಲ್ಗುಟ್ಕರ್ ಅಕ್ರಮ ಮಣ್ಣುಗಾರಿಕೆ ನಡೆಸುವ ಬಗ್ಗೆ ಅಲ್ಲಲ್ಲಿ ದೂರುವುದಾಗಿ ಬೆದರಿಸಿದ್ದರು. ಇದಕ್ಕೆ ಪ್ರತಿಯಾಗಿ ಸಾಹಿಲ್ ಅವರ ಉದ್ದಿಮೆಗೆ ಪ್ರಶಾಂತ ಗೋವೇಕರ್ ತೊಂದರೆ ನೀಡಿದ ಬಗ್ಗೆ ದೂರಲಾಗಿತ್ತು. ಈ ವಿಷಯ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಪೊಲೀಸರು ಮುಚ್ಚಳಿಕೆ ಬರೆಯಿಸಿ ಬಿಟ್ಟಿದ್ದರು.
ಅದಾಗಿಯೂ, ಪದೇ ಪದೇ ತೊಂದರೆ ನೀಡಿದ ಕಾರಣ ಸಾಹಿಲ್ ಕಲ್ಗುಟ್ಕರ್ ನ್ಯಾಯಾಲಯದ ಮೊರೆ ಹೋದರು. ಪ್ರಶಾಂತ ಗೋವೇಕರ್ ಬೆದರಿಕೆ ಒಡ್ಡಿದ ಬಗ್ಗೆ ನ್ಯಾಯಾಧೀಶರ ಬಳಿ ಅಳಲು ತೋಡಿಕೊಂಡರು. ಲಾರಿ ಸುಡುವುದಾಗಿ ಬೆದರಿಕೆ ಒಡ್ಡಿರುವ ಬಗ್ಗೆ ವಿವರಿಸಿದರು.
ಈ ಹಿನ್ನಲೆ ನ್ಯಾಯಾಲಯ ಪೊಲೀಸ್ ಪ್ರಕರಣ ದಾಖಲಿಸಲು ಸೂಚನೆ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.