ಕಾರವಾರ: ಹಬ್ಬುವಾಡ ರಸ್ತೆಯಲ್ಲಿನ ಹೊಂಡದ ವಿರುದ್ಧ ಸಿಡಿದೆದ್ದ ಜನ ಸೋಮವಾರ ಸಂಜೆ ದಿಢೀರ್ ರಸ್ತೆ ತಡೆ ನಡೆದಿ ಪ್ರತಿಭಟನೆ ನಡೆಸಿದರು. `ರಸ್ತೆ ಮೇಲಿನ ಹೊಂಡ ಮುಚ್ಚಲು ಅಧಿಕಾರಿಗಳು ಅಸಡ್ಡೆ ತೋರುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ರಿಕ್ಷಾ ಚಾಲಕರು ಈ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು. ತಮ್ಮ ರಿಕ್ಷಾಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ವಾಹನ ಸಂಚಾರ ತಡೆದರು. ಪ್ರತಿಭಟನೆಗೆ ಆಗಮಿಸಿದ ನೂರಾರು ಜನ ರಸ್ತೆಗೆ ಅಡ್ಡಲಾಗಿ ಕುಳಿತು ಆಕ್ರೋಶ ವ್ಯಕ್ತಪಡಿಸಿದರು. `ಒಂದೇ ದಿನ ಮೂರು ಅಪಘಾತ ನಡೆದಿದೆ. ಆದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ’ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದವರು ಅಳಲು ತೋಡಿಕೊಂಡರು.
ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು `ಪ್ರತಿಭಟನೆ ಕೈ ಬಿಡಿ’ ಎಂದು ಮನವಿ ಮಾಡಿದರು. `ರಸ್ತೆ ಹೊಂಡದಿoದ ಪೊಲೀಸರು ಸಮಸ್ಯೆ ಅನುಭವಿಸುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ಘಟನಾವಳಿಗಳೊಂದಿಗೆ ವಿವರಿಸಿದರು. `ಸಮಸ್ಯೆ ಬಗ್ಗೆ ನಮಗೂ ಅರಿವಿದೆ. ಆದರೆ, ಈ ರೀತಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಬೇಡಿ. ಇದರಿಂದ ಜನರಿಗೆ ಸಮಸ್ಯೆಯಾಗುತ್ತದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮನವಿ ಮಾಡಿದರು.
ಪೊಲೀಸರ ಮಾತಿಗೆ ಮನ್ನಣೆ ನೀಡಿದ ಪ್ರತಿಭಟನಾಕಾರರು ತಮ್ಮ ಹೋರಾಟ ಹಿಂಪಡೆದರು. ರಸ್ತೆ ಹೊಂಡ ಮುಚ್ಚದೇ ಇದ್ದರೆ ಮತ್ತೆ ಪ್ರತಿಭಟಿಸುವುದಾಗಿ ಎಚ್ಚರಿಸಿದರು.